ಬೆಂಗಳೂರು: ಡ್ರಗ್ಸ್ ದಂಧೆಯಲ್ಲಿ ಇಬ್ಬರು ಕಾನ್ಸ್ಟೇಬಲ್ಗಳ ಬಂಧನ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಸಿಸಿಬಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದು, ಈ ಮೂಲಕ 11 ಮಂದಿಯನ್ನು ಹೆಡೆಮುರಿ ಕಟ್ಟಿದ್ದಾರೆ.
ಸಿಎಂ ಮನೆ ಮುಂದೆ ಭದ್ರತೆಗಾಗಿ ನಿಯೋಜನೆಗೊಂಡಿದ್ದ ಇಬ್ಬರು ಕಾನ್ಸ್ಟೇಬಲ್ ಸೇರಿ ಇದುವರೆಗೂ 8 ಮಂದಿಯನ್ನು ಬಂಧಿಸಲಾಗಿತ್ತು. ಬಂಧಿತರು ನೀಡಿದ ಸುಳಿವಿನ ಮೇರೆಗೆ ಒಡಿಶಾ ಮೂಲದ ಪೂಜಾ, ತಮಿಳುನಾಡಿನ ಸೋಮಸುಂದರಂ ಹಾಗೂ ನಾಗಪುರದ ಶಿವಪಾಟೀಲ್ ಎಂಬುವವರನ್ನು ಬಂಧಿಸಲಾಗಿದೆ. ಆರೋಪಿಗಳಿಂದ 5 ಕೆಜಿ ಗಾಂಜಾವನ್ನು ವಶಕ್ಕೆ ಪಡೆದು ಸಿಸಿಬಿ ಇನ್ಸ್ಪೆಕ್ಟರ್ ಅಶೋಕ್ ವಿಚಾರಣೆ ಚುರುಕುಗೊಳಿಸಿದ್ದಾರೆ.
ಡ್ರಗ್ಸ್ ದಂಧೆಯಲ್ಲಿ ಪೊಲೀಸರು ಶಾಮೀಲಾಗಿರುವ ಪ್ರಕರಣದ ತನಿಖೆ ಆರ್.ಟಿ.ನಗರ ಪೊಲೀಸ್ ಠಾಣೆಯಿಂದ ಸಿಸಿಬಿಗೆ ವರ್ಗಾವಣೆಗೊಂಡಿತ್ತು. ಕೂಡಲೇ ಕಾರ್ಯ ಪ್ರವೃತ್ತರಾದ ಸಿಸಿಬಿ ನಿಗ್ರಹದಳದ ಎಸಿಬಿ ಗೌತಮ್, ಇನ್ಸ್ಪೆಕ್ಟರ್ ಅಶೋಕ್ ನೇತೃತ್ವದಲ್ಲಿ ಸೆರೆಸಿಕ್ಕ ಆರೋಪಿಗಳನ್ನು ವಿಚಾರಣೆ ನಡೆಸಿದಾಗ ಬಂಧಿತರಾಗಿರುವ ಮೂವರು ಆರೋಪಿಗಳ ಬಗ್ಗೆ ಬಾಯ್ಬಿಟ್ಟಿದ್ದರು.
ಇದನ್ನೂ ಓದಿ: ನಾಳೆ ಸಿಎಂ ಜನ್ಮದಿನ.. ನಾಡಿನ ಜನತೆಗೆ ಬರ್ತ್ಡೇ ಗಿಫ್ಟ್ ಕೊಡೋ ಬಗ್ಗೆ ಏನಂದ್ರು ಗೊತ್ತಾ?
ಶಿವಪಾಟೀಲ್ ಜಯನಗರ ಹಾಗೂ ಸೋಮಸುಂದರ ಎಸ್.ಜಿ. ಪಾಳ್ಯದಲ್ಲಿ ಪ್ರತ್ಯೇಕವಾಗಿ ವಾಸವಾಗಿದ್ದರು. ಇಬ್ಬರು ಸ್ನೇಹಿತರಾಗಿದ್ದರಿಂದ ಕಳೆದೊಂದು ವರ್ಷದಿಂದ ಒಟ್ಟಿಗೆ ಡ್ರಗ್ಸ್ ಜಾಲದಲ್ಲಿ ತೊಡಗಿಸಿಕೊಂಡಿದ್ದರು. ಇವರು ಒಡಿಶಾದಲ್ಲಿ ನೆಲೆಸಿದ್ದ ಪೂಜಾಳನ್ನು ಸಂಪರ್ಕಿಸಿ ನಗರಕ್ಕೆ ಡ್ರಗ್ಸ್ ತರಿಸಿಕೊಳ್ಳುತ್ತಿದ್ದರು. ಬಳಿಕ ಅದನ್ನು ಬಿಟಿಎಂ ಲೇಔಟ್, ಕೋರಮಂಗಲ ಸೇರಿದಂತೆ ನಗರದ ಹಲವು ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಡ್ರಗ್ಸ್ ಮಾರಾಟ ಮಾಡಿ ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿದ್ದರು ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ