ಬೆಂಗಳೂರು: ಇಡೀ ದೇಶವನ್ನು ಬೆಚ್ಚಿ ಬೀಳಿಸುತ್ತಿರುವ ಸಾಮೂಹಿಕ ಅತ್ಯಾಚಾರ ಪ್ರಕರಣ ಗಂಭೀರತೆ ಅರಿತ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹೈ ಅಲರ್ಟ್ ಸೂಚಿಸಿದ್ದಾರೆ.
ಆರೋಪಿಗಳು ಅತ್ಯಾಚಾರ ಎಸಗಿ, ಹೇಯವಾಗಿ ಹತ್ಯೆಗೈದಿರುವ ಘಟನೆ ಒಂಟಿ ಮಹಿಳೆಯರನ್ನು ಕಂಗಾಲಾಗಿಸಿದೆ. ಬೆಂಗಳೂರು ಪೊಲೀಸರು ಭಾಸ್ಕರ್ ರಾವ್ ನೇತೃತ್ವದಲ್ಲಿ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನ.30ರಂದು ತುರ್ತು ಸಭೆ ನಡೆಸಿದ್ದು, ಇಲಾಖೆಯ ಸಿಬ್ಬಂದಿಗೆ ಎಲ್ಲಾ ಪ್ರದೇಶಗಳ ಪಟ್ಟಿ ಮಾಡುವಂತೆ ಸೂಚನೆ ನೀಡಲಾಗಿದೆ.
ಪ್ರಮುಖ ರಸ್ತೆ, ಅಂಡರ್ ಪಾಸ್ ಬಿಡ್ಜ್ಗಳು, ಮೇಲ್ಸೇತುವೆಗಳ ಸ್ಥಳಗಳಲ್ಲಿ ಪೊಲೀಸ್ ಪರಿಶೀಲನೆ ನಡೆಸಲು ಸೂಚಿಸಲಾಗಿದೆ. ಮಹಿಳೆಯರ ಸುರಕ್ಷತೆಗೆ ಸಂಬಂಧಪಟ್ಟ ಪ್ರೇರಣಾ ಆ್ಯಪ್, ಪಿಂಕ್ ಪೊಲೀಸ್ ಆ್ಯಪ್, ಸೇಫರ್ ಆ್ಯಪ್ ಹಾಗೆ ಡೈಯಲ್ ನಂಬರ್ಗಳನ್ನ ಕೂಡಲೇ ಅಪ್ಡೇಟ್ ಮಾಡುವಂತೆ ಸೂಚನೆ ನೀಡಲಾಗಿದೆ.
ಸುರಕ್ಷ ಆ್ಯಪ್ ಆನ್ ಮಾಡಿದರೆ, ಅದರ ಮೂಲಕ ಮಾಹಿತಿ ತಿಳಿಯುತ್ತದೆ. ಹಾಗೆ 100 ತುರ್ತು ಕರೆಗಳಿಗೆ ಸ್ಥಳೀಯ ಪೊಲೀಸರು 7 ರಿಂದ 9 ನಿಮಿಷಗಳಲ್ಲಿ ಸ್ಥಳ ತಲುಪಬೇಕು. 24 ಗಂಟೆ ಜನರು ಸುರಕ್ಷತೆಯಿಂದ ಇರಬೇಕು ಇದಕ್ಕೆ ಪೊಲೀಸ್ ಇಲಾಖೆ ಶ್ರಮ ವಹಿಸಬೇಕು ಎಂದು ಇಲಾಖೆಯ ಹಿರಿಯ ಹಾಗೂ ಕಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.