ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದ ಅಲ್ಪಸಂಖ್ಯಾತ ವಿರೋಧಿ ಧೋರಣೆ ಖಂಡಿಸಿ ಕಾಂಗ್ರೆಸ್ ನಾಯಕರು ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಲು ಮುಂದಾದ ಸಂದರ್ಭ ಪೊಲೀಸರು ನಾಯಕರನ್ನು ಬಂಧಿಸಿದ್ದಾರೆ.
ರೇಸ್ ಕೋರ್ಸ್ ರಸ್ತೆಯ ಮೌರ್ಯ ಸರ್ಕಲ್ನಲ್ಲಿ ಪ್ರತಿಭಟನೆ ಆರಂಭಿಸಿದ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು, ಸಿದ್ದರಾಮಯ್ಯ ಭಾಷಣದ ನಂತರ ಅವರ ನೇತೃತ್ವದಲ್ಲಿಯೇ ಮೆರವಣಿಗೆ ತೆರಳಿ ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಿದ್ದರು. ಆದರೆ ಪೊಲೀಸರು ಪ್ರತಿಭಟನಾಕಾರರನ್ನು ಪದ್ಮಶ್ರೀ ಆರ್ಎಂಪಿ ಆರಾಧ್ಯ ವೃತ್ತದಲ್ಲಿ ಬಂಧಿಸಿದ್ದಾರೆ.
ಈ ವೇಳೆ ಮಾತನಾಡಿದ ಸಿದ್ದರಾಮಯ್ಯ, ನಿಜವಾದ ದೇಶದ್ರೋಹ ಮಾಡುತ್ತಿರುವವರು ಯಾರು? ದೇಶದ್ರೋಹ ಮಾಡುವವರು ಬಿಜೆಪಿಯವರು. ಮಂಗಳೂರಿನಲ್ಲಿ ಗೋಲಿಬಾರ್ ಆಯ್ತು, ಅದಕ್ಕೆ ನಮ್ಮ ಶಾಸಕ ಖಾದರ್ ಮೇಲೆ ಕೇಸ್ ಹಾಕಿದ್ದಾರೆ. ಮೈಸೂರಿನಲ್ಲಿ ಫ್ರೀ ಕಾಶ್ಮೀರ ಅಂತ ಹೆಣ್ಣು ಮಗಳು ಹೇಳಿದ್ದಕ್ಕೆ ದೇಶದ್ರೋಹ ಕೇಸ್ ಹಾಕಲಾಗಿದೆ. ಬೀದರ್ನ ಶಾಹೀನ್ ಶಾಲೆ ಮೇಲೆ ದೇಶದ್ರೋಹದ ಕೇಸ್ ಜಡಿಯಲಾಗಿದೆ. ನಾಟಕ ಮಾಡಿದ್ದಕ್ಕೆ ದೇಶದ್ರೋಹ ಕೇಸ್ ಹಾಕಿದ್ದಾರೆ ಎಂದು ಆರೋಪಿಸಿದರು.
ಪೊಲೀಸರು ನಿಷ್ಪಕ್ಷಪಾತವಾಗಿ ಕೆಲಸ ಮಾಡ್ತಿಲ್ಲ. ನಮ್ಮ ಪಕ್ಷದವರನ್ನ ಗುರ್ತಿಸಿ ಕೇಸ್ ಹಾಕ್ತಿದ್ದಾರೆ. ಆದರೆ ಶಾಸಕ ಸೋಮಶೇಖರ್ ರೆಡ್ಡಿ ಉಗ್ರವಾದದ ಹೇಳಿಕೆ ಕೊಟ್ರು ಅವರ ಮೇಲೆ ಯಾಕೆ ದೇಶದ್ರೋಹದ ಕೇಸ್ ಹಾಕಲಿಲ್ಲ. ಕಲ್ಲಡ್ಕ ಪ್ರಭಾಕರ್ ಭಟ್ ಶಾಲೆಯಲ್ಲಿ ಬಾಬರಿ ಮಸೀದಿ ಧ್ವಂಸವನ್ನ ಕೆಟ್ಟದಾಗಿ ತೋರಿಸ್ತಾರೆ. ಸುಪ್ರೀಂಕೋರ್ಟ್ ಮಸೀದಿ ಒಡೆದಿದ್ದು ಕಾನೂನು ಬಾಹಿರ ಅಂದಿದೆ. ಕಲ್ಲಡ್ಕ ಭಟ್ಟರ ಮೇಲೆ ದೇಶದ್ರೋಹ ಕೇಸ್ ಯಾಕೆ ಹಾಕಲಿಲ್ಲ. ಅಶೋಕ್, ಅನಂತ್ ಕುಮಾರ್ ಹೆಗಡೆ, ಸಿ.ಟಿ.ರವಿ, ಎಂತದ್ದೋ ಸೂರ್ಯನ ಮೇಲೆ ಯಾವ ಕೇಸ್ ಹಾಕಿದ್ದೀರಾ? ನಾನು ಅವನನ್ನು ಯಾವಾಗಲೂ ಅಮಾವಾಸ್ಯೆ ಎಂದೆ ಕರೆಯುತ್ತೇನೆ. ಪ್ರತಾಪ್ ಸಿಂಹ, ಕಟೀಲ್ ಮೇಲೆ ಕೇಸ್ ಹಾಕಿದ್ದೀರಾ? ಸಂತೋಷ್ ಮೇಲೆ ಯಾವ ಕೇಸ್ ಹಾಕಿದ್ದೀರಾ? ಇದರ ಬಗ್ಗೆ ಮೊದಲು ಪೊಲೀಸರು ಹೇಳಲಿ. ಪೊಲೀಸರು ಸರ್ಕಾರದ ಕೈಗೊಂಬೆಯಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರದ ವಿರುದ್ಧ ಗುಡುಗಿದ ಉಗ್ರಪ್ಪ:
ಬಳಿಕ ಮಾಜಿ ಸಂಸದ ಉಗ್ರಪ್ಪ ಮಾತನಾಡಿ, ರಾಜ್ಯ ಸರ್ಕಾರ ಸಂವಿಧಾನವನ್ನ ಗಾಳಿಗೆ ತೂರಿದೆ. ಬಿಜೆಪಿಯವರು ಪೊಲೀಸರನ್ನ ದುರ್ಬಳಕೆ ಮಾಡಿಕೊಳ್ತಿದ್ದಾರೆ. ಹ್ಯಾರೀಸ್ ಪುತ್ರನ ಆಕ್ಸಿಡೆಂಟ್ ಕೇಸನ್ನ ದೊಡ್ಡದಾಗಿ ಮಾಡಿದ್ರು. ಆದರೆ ಆಶೋಕ್ ಅವರ ಮಗ ಆಕ್ಸಿಡೆಂಟ್ ಪ್ರಕರಣದಲ್ಲಿ ಇಲ್ಲ ಅಂತಿದ್ದಾರೆ. ಅಲ್ಲಿನ ಎಸ್ಪಿ ಏನೂ ಆಗಿಲ್ಲ ಎನ್ನುತ್ತಿದ್ದಾರೆ. ಅಲ್ಲಿದ್ದ ಪ್ರತ್ಯಕ್ಷದರ್ಶಿಗಳೇ ಅವರ ಪುತ್ರ ಇದ್ದರು ಎನ್ನುತ್ತಿದ್ದಾರೆ. ಇದು ಪೊಲೀಸರ ತಾರತಮ್ಯ ನೀತಿಯನ್ನ ತೋರಿಸುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಪೋಲಿಸ್ ಇಲಾಖೆ ದುರ್ಬಳಕೆ:
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ಶಾಹೀನ್ ಶಾಲೆಯ ಶಿಕ್ಷಕರ ಮತ್ತು ಮಕ್ಕಳ ವಿರುದ್ಧ ಕೇಸ್ ಹಾಕ್ತಾರೆ. ನಿನ್ನೆ ಅವರಿಗೆ ಜಾಮೀನು ಸಿಕ್ಕಿದೆ. ಅಂದ್ರೆ ಪೊಲೀಸ್ ಇಲಾಖೆ ದುರ್ಬಳಕೆ ಆಗ್ತಿದೆ. ಕಲ್ಲಡ್ಕ ಪ್ರಭಾಕರ್ ಭಟ್ ಮಾತಾಡ್ತಾರೆ. ರೇಣುಕಾಚಾರ್ಯ ಬಾಯಿಗೆ ಬಂದಂಗೆ ಮಾತಾಡ್ತಾರೆ. ಸಿ.ಟಿ. ರವಿ, ಅನಂತಕುಮಾರ್ ಹೆಗಡೆ ಮಾತಾಡ್ತಾರೆ ಅವರ ವಿರುದ್ಧ ಯಾವುದೇ ಕೇಸ್ ಇಲ್ಲ. ಆದ್ರೆ ಯು. ಟಿ. ಖಾದರ್ ಮಾತಾಡಿದ್ರೆ ದೇಶದ್ರೋಹದ ಕೇಸ್ ಹಾಕ್ತಾರೆ. ಯಾಕೆ ಹೀಗೆ ? ಅದಕ್ಕಾಗಿಯೇ ಸಿಎಂ ಕಚೇರಿಗೆ ಮುತ್ತಿಗೆ ಹಾಕ್ತಿದ್ದೇವೆ. ಭಯದ ವಾತಾವರಣ ಸೃಷ್ಟಿ ಮಾಡುವ ಯತ್ನ ನಡೆದಿದೆ. ಕಾಂಗ್ರೆಸ್ ಯಾವಾಗಲೂ ಜನಪರ ಹೋರಾಟ ಮಾಡೊ ಪಕ್ಷ ಎಂದರು.
ಪ್ರತಿಭಟನೆಯಲ್ಲಿ ಸಂಸದ ಡಿ.ಕೆ. ಸುರೇಶ, ಮಾಜಿ ಸಂಸದ ಉಗ್ರಪ್ಪ, ಶಾಸಕಿ ಸೌಮ್ಯರೆಡ್ಡಿ, ಪುಷ್ಪಾ ಅಮರನಾಥ, ಎಂಎಲ್ಸಿ ನಾರಾಯಣಸ್ವಾಮಿ ಸೇರಿ ನೂರಾರು ಕಾರ್ಯಕರ್ತರು ಭಾಗಿಯಾಗಿದ್ದರು.