ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿರುದ್ಧ ದಾಸರಹಳ್ಳಿ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಪಿ.ಎನ್ ಕೃಷ್ಣಮೂರ್ತಿ ಗಂಭೀರ ಆರೋಪ ಮಾಡಿದ್ದಾರೆ. ಈ ಬಗ್ಗೆ ಪತ್ರ ಬರೆದಿರುವ ಅವರು "ಪಕ್ಷದ ಅಧ್ಯಕ್ಷರು ದಾಸರಹಳ್ಳಿ ಜೆಡಿಎಸ್ ಅಭ್ಯರ್ಥಿ ಮಂಜುನಾಥ್ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದಾರೆ. ದಾಸರಹಳ್ಳಿ ಮಂಜುನಾಥ್ ಅವರನ್ನು ಕಾಂಗ್ರೆಸ್‌ಗೆ ಕರೆತರಲು ಪ್ರಯತ್ನ ಮಾಡಿ ವಿಫಲರಾದರು. ಹೀಗಾಗಿ ಮಂಜುನಾಥ್ ಅವರಿಗೆ ಅನುಕೂಲ ಆಗಲು ಧನಂಜಯ್ ಅವರಿಗೆ ಟಿಕೆಟ್ ನೀಡಿದ್ದಾರೆ" ಎಂದು ದೂರಿದ್ದಾರೆ.
ದಾಸರಹಳ್ಳಿ ಜೆಡಿಎಸ್ ಅಭ್ಯರ್ಥಿಗೆ ಗೆಲುವು ಸಿಗಲು ಕಳೆದ ಬಾರಿಯೂ ಕಾಂಗ್ರೆಸ್ ಪಕ್ಷಕ್ಕೆ ಹಾಗೂ ಟಿಕೆಟ್ ಆಕಾಂಕ್ಷಿಗಳಿಗೆ ಡಿಕೆಶಿ ದ್ರೋಹ ಮಾಡಿದ್ದರು. ನನ್ನನ್ನು ಸೋಲಿಸಲೆಂದೆ ಆರ್ಆರ್ ನಗರದಲ್ಲಿ ಜೆಡಿಎಸ್ನಿಂದ 2013ರಲ್ಲಿ ಹನುಮಂತರಾಯಪ್ಪ ಅವರನ್ನು ಕರೆತಂದು ಜೆಡಿಎಸ್ ಟಿಕೆಟ್ ನೀಡಿದ್ದರು ಎಂದು ಪತ್ರದಲ್ಲಿ ಅವರು ಆರೋಪ ಮಾಡಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷರ ವಿರುದ್ಧವೇ ಗಂಭೀರ ಆರೋಪ ಮಾಡಿರುವ ಪಿ.ಎನ್ ಕೃಷ್ಣಮೂರ್ತಿ ನಡೆಗೆ ಪಕ್ಷ ಹಾಗೂ ಪಕ್ಷದ ಶಿಸ್ತು ಸಮಿತಿ ಯಾವ ರೀತಿಯ ಕ್ರಮ ಕೈಗೊಳ್ಳಲಿದೆ ಎಂಬುವುದನ್ನು ಕಾದು ನೋಡಬೇಕಿದೆ.
ಖರ್ಗೆ ಹೇಳಿಕೆಗೆ ಸುರ್ಜೇವಾಲ ಸಮಜಾಯಿಸಿ: ಮೋದಿ ವಿಷ ಸರ್ಪ ಇದ್ದಂತೆ ಎಂಬ ಹೇಳಿಕೆ ಬಳಿಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಪಕ್ಷಕ್ಕೆ ಆಗಬಹುದಾದ ನಷ್ಟವನ್ನು ಖರ್ಗೆ ಅವರ ಸ್ಪಷ್ಟೀಕರಣದ ಮೂಲಕ ಸರಿಪಡಿಸಿಕೊಂಡಿರುವ ಕಾಂಗ್ರೆಸ್, ಉಳಿದದ್ದನ್ನು ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಮೂಲಕ ಮಾಡುವ ಪ್ರಯತ್ನಕ್ಕೆ ಮುಂದಾಗಿದೆ.
ಖರ್ಗೆ ಪರ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಬ್ಯಾಟಿಂಗ್ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ವಿಷ ಸರ್ಪ ಡ್ಯಾಮೇಜ್ಗೆ ದಲಿತ ಅಸ್ತ್ರ ಪ್ರಯೋಗಿಸಿದ್ದಾರೆ. "ಮಲ್ಲಿಕಾರ್ಜುನ ಖರ್ಗೆ ದಲಿತ ಕುಟುಂಬದಲ್ಲಿ ಹುಟ್ಟಿ ಎಐಸಿಸಿ ಅಧ್ಯಕ್ಷರಾಗಿದ್ದಾರೆ. ಖರ್ಗೆ ಅವರ ಹೇಳಿಕೆ ಹಿಂದೆ ದಲಿತ ಸಮುದಾಯ, ಬಡವರ ನೋವು, ದಮನಿತರ ಕೂಗು ಅಡಗಿದೆ. ಬಿಜೆಪಿ ತಾಕತ್ತಿದ್ದರೆ ದಲಿತರನ್ನ ಪಕ್ಷದ ಅಧ್ಯಕ್ಷರಾಗಿ ಮಾಡಲಿ. ಖರ್ಗೆ ಅವರು ವೈಯಕ್ತಿಕ ಟೀಕೆ ಮಾಡಿಲ್ಲ. ಇದು ಸಿದ್ಧಾಂತದ ಟೀಕೆ. ಕರ್ನಾಟಕದಲ್ಲಿ ವ್ಯಕ್ತಿಗತವಾಗಿ ಚುನಾವಣೆ ನಡೆಯುತ್ತಿಲ್ಲ. ಇಲ್ಲಿ ಆರೂವರೆ ಕೋಟಿ ಜನರ ಚುನಾವಣೆ. 40 ಪರ್ಸೆಂಟ್ ಕಮಿಷನ್ ವಿರುದ್ಧದ ಚುನಾವಣೆ. ಇದನ್ನ ಸಹಿಸಲಾಗದೆ, ಖರ್ಗೆ ಹೇಳಿಕೆ ಇಟ್ಟುಕೊಂಡು ವೈಯಕ್ತಿಕ ಚುನಾವಣೆ ಮಾಡಲು ಬಿಜೆಪಿ ಹೊರಟಿದೆ" ಎಂದು ದೂರಿದ್ದಾರೆ.
ಕಾಂಗ್ರೆಸ್ ವಿಡಿಯೋ ಬಿಡುಗಡೆ: ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲುವಿಗೆ 10 ಕಾರಣಗಳು ಎಂಬ ವಿಷಯದ ಮೇಲೆ ಪಕ್ಷ ವಿಡಿಯೋ ಬಿಡುಗಡೆ ಮಾಡಿದೆ. ಅದರಲ್ಲಿರುವ ಪ್ರಮುಖಾಂಶಗಳು ಹೀಗಿವೆ...
1.ಕಾಂಗ್ರೆಸ್‌ನ 4 ಗ್ಯಾರೆಂಟಿಗಳು.
2. ಬಿಜೆಪಿಯ 40 ಪರ್ಸೆಂಟ್ ಕಮಿಷನ್.
3. ಒಗ್ಗಟ್ಟಿನ ಕಾಂಗ್ರೆಸ್, ತೂತುಮಡಿಕೆ ಬಿಜೆಪಿ.
4. ಕಾಂಗ್ರೆಸ್ ಪಕ್ಷಕ್ಕೆ ದಿಗ್ಗಜ ಲೀಡರ್‌ಗಳ ಬಲ.
5. ಬಿಜೆಪಿ ವಿರುದ್ಧ ಲಿಂಗಾಯತರ ಕೋಪ.
6. ಕರ್ನಾಟಕ ಒಂದು ಪಕ್ಷದ ಬಹುಮತವನ್ನು ಬಯಸುತ್ತಿದೆ.
7. ಕಾಂಗ್ರೆಸ್‌ಗೆ ದಲಿತರ ಒಗ್ಗಟ್ಟಿನ ಬೆಂಬಲ.
8. ಸರ್ವಜನಾಂಗದ ಶಾಂತಿಯ ತೋಟವನ್ನು ವಿಭಜಿಸಿದ ಬಿಜೆಪಿ.
9. ನಿರುದ್ಯೋಗ ಮತ್ತು ಬೆಲೆ ಏರಿಕೆ.
10. ಕರ್ನಾಟಕ ಬಿಜೆಪಿ ಮೇಲೆ ದೆಹಲಿ ನಿಯಂತ್ರಣ.
ಸಂಘಟಿತ ಕಾಂಗ್ರೆಸ್ 150+ ಸೀಟ್ ಗೆಲ್ಲುತ್ತಿದ್ದು, 40 % ಬಿಜೆಪಿ ಕೇವಲ 40 ಸೀಟುಗಳಿಗೆ ಸೀಮಿತವಾಗಲಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಪ್ರಗತಿ ತರಲಿದೆ ಎಂದು ವಿವರಿಸಿದೆ.
ಇದನ್ನೂ ಓದಿ: ರಾಜ್ಯದಲ್ಲಿ ಬಿಜೆಪಿಗೆ ಸೋಲಿನ ಹತಾಶೆ, ಪ್ರಧಾನಿ ಬಾಯಲ್ಲೂ ಕಾಂಗ್ರೆಸ್ ಗ್ಯಾರಂಟಿಯದ್ದೇ ಮಾತು: ಡಿಕೆಶಿ