ಬೆಂಗಳೂರು: ಕೋವಿಡ್ ಪರಿಸ್ಥಿತಿ ಪರಿಶೀಲನೆ, ಲಸಿಕೆ ವಿತರಣಾ ಕಾರ್ಯತಂತ್ರಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ವರ್ಚುಯಲ್ ಸಭೆ ಆರಂಭವಾಗಿದ್ದು, ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕೂಡಾ ಭಾಗಿಯಾಗಿದ್ದಾರೆ.
ವಿಧಾನಸೌಧದಲ್ಲಿ ನಡೆಯುತ್ತಿರುವ ವರ್ಚುಯಲ್ ಸಭೆಯಲ್ಲಿ ಸಿಎಂ ಬಿಎಸ್ವೈ ಪಾಲ್ಗೊಂಡಿದ್ದು, ಕೋವಿಡ್ ಪರಿಸ್ಥಿತಿ ಬಗ್ಗೆ ಪ್ರಧಾನಿ ಚರ್ಚಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಈ ಮಹತ್ವದ ಸಭೆಯಲ್ಲಿ, ರಾಜ್ಯಗಳ ಮುಖ್ಯಮಂತ್ರಿಗಳು, ರಾಜ್ಯ ಮತ್ತು ಕೇಂದ್ರ ಪ್ರಾಂತ್ಯಗಳ ಇತರ ಪ್ರತಿನಿಧಿಗಳು ಭಾಗವಹಿಸಿದ್ದಾರೆ. ಲಸಿಕೆ ವಿತರಣಾ ಕಾರ್ಯತಂತ್ರದ ಬಗ್ಗೆ ಚರ್ಚಿಸಲು ಪ್ರಧಾನಿ ಮೋದಿ ಎರಡು ಬ್ಯಾಕ್ - ಟು- ಬ್ಯಾಕ್ ಸಭೆಗಳನ್ನು ನಡೆಸಲಿದ್ದಾರೆ.
ಕೋವಿಡ್ ಪ್ರಕರಣ ಹೆಚ್ಚಾಗಿರುವ ರಾಜ್ಯಗಳ ಪೈಕಿ ಕೇರಳ, ಪಶ್ಚಿಮ ಬಂಗಾಳ, ಹರಿಯಾಣ, ದೆಹಲಿ, ರಾಜಸ್ಥಾನ, ಗುಜರಾತ್, ಮಹಾರಾಷ್ಟ್ರ ಮತ್ತು ಛತ್ತೀಸ್‌ಗಡ ರಾಜ್ಯಗಳಿವೆ. ಎರಡನೇ ಸಭೆಯಲ್ಲಿ ಪಿಎಂ ಮೋದಿ, ಎಲ್ಲ ರಾಜ್ಯಗಳ ಸಿಎಂ / ಪ್ರತಿನಿಧಿಗಳ ಜೊತೆ ಸಮಾಲೋಚನೆ ಮಾಡಲಿದ್ದಾರೆ.
ಲಸಿಕೆ ಲಭ್ಯವಾದಾಗ, ತ್ವರಿತ ಮತ್ತು ಪರಿಣಾಮಕಾರಿಯಾಗಿ ಅದನ್ನು ವಿತರಿಸುವ ಬಗ್ಗೆ ಸಮಾಲೋಚನೆ ನಡೆಯಲಿದೆ. ಈ ನಿಟ್ಟಿನಲ್ಲಿ ಕೇಂದ್ರದ ಯೋಜನೆ, ಕಾರ್ಯತಂತ್ರ, ಲಸಿಕೆ ದಾಸ್ತಾನು, ಪೂರೈಕೆಗೆ ಸಿದ್ಧತೆ ಬಗ್ಗೆ ಚರ್ಚೆ, ಚಳಿಗಾಲದಲ್ಲಿ ಕೋವಿಡ್ ನಿರ್ವಹಣೆ, ಟೆಸ್ಟಿಂಗ್, ಚಿಕಿತ್ಸೆ, ಸಾವಿನ ಪ್ರಮಾಣ ನಿಯಂತ್ರಣ ಸೇರಿದಂತೆ ಕೋವಿಡ್ ಕುರಿತು ಮಹತ್ವದ ವಿಚಾರಗಳ ಬಗ್ಗೆ ಅವರು ಚರ್ಚೆ ನಡೆಸಲಿದ್ದಾರೆ.