ಬೆಂಗಳೂರು: ಕೋವಿಡ್-19 ಪಿಡುಗಿನಿಂದ ಜನಜೀವನದ ಮೇಲೆ ಆಗುವ ದುಷ್ಪರಿಣಾಮಗಳನ್ನು ತಡೆಯಲು ಕೇಂದ್ರ ಸರ್ಕಾರ 1.70 ಲಕ್ಷ ಕೊಟಿ ಹಣ ಬಿಡುಗಡೆ ಮಾಡಿರುವುದಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಭಿನಂದನೆ ಸಲ್ಲಿಸಿದ್ದಾರೆ.
ಸಂಕಷ್ಟದ ಈ ಸಮಯದಲ್ಲಿ ಕೇಂದ್ರ ಸರ್ಕಾರದ ಈ ನಿರ್ಧಾರವು ಬಡವರು, ರೈತರು, ಮಹಿಳೆಯರು ಮತ್ತು ಕೂಲಿ ಕಾರ್ಮಿಕರನ್ನು ನೆಮ್ಮದಿಯಾಗಿ ಬದುಕಲು ಅನುವು ಮಾಡಿಕೊಡುವುದರ ಜೊತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೋವಿಡ್-19 ವಿರುದ್ಧ ತೆಗೆದುಕೊಂಡ ಕ್ರಮಗಳನ್ನು ಹೆಚ್ಚು ಗಂಭೀರವಾಗಿ ಮತ್ತು ಚುರುಕಾಗಿ ಅನುಷ್ಠಾನಗೊಳಿಸುವಲ್ಲಿ ಸಹಕಾರಿಯಾಗುತ್ತದೆ ಎಂದು ಸಿಎಂ ಬಿಎಸ್ವೈ ಪತ್ರಿಕಾ ಹೇಳಿಕೆ ಮೂಲಕ ತಿಳಿಸಿದ್ದಾರೆ.
ಬಡವರ ಹಸಿವನ್ನು ಅರ್ಥ ಅರಿತುಕೊಂಡ ಸರ್ಕಾರವು 80 ಕೋಟಿ ಜನರಿಗೆ ಪ್ರತಿ ತಿಂಗಳು 5 ಕೆಜಿ ಹೆಚ್ಚುವರಿ ಗೋಧಿ ಅಥವಾ ಅಕ್ಕಿ ಮತ್ತು 1 ಕೆಜಿ ಬೇಳೆಯನ್ನು ಕೊಡಲು ನಿರ್ಧರಿಸಿದ್ದು, ಒಂದು ದೊಡ್ಡ ಅಸಾಧಾರಣ ನಿರ್ಧಾರವನ್ನು ತೆಗೆದುಕೊಂಡಿದೆ. ಮಹಿಳೆಯರ ಜನಧನ್ ಖಾತೆಗೆ ಪ್ರತಿ ತಿಂಗಳು ರೂ. 500ರಂತೆ 3 ತಿಂಗಳಿಗೆ 1500 ರೂ.ಗಳನ್ನು ಮುಂಗಡವಾಗಿ ವರ್ಗಾವಣೆ ಮಾಡುವುದು, ಕಿಸಾನ್ ಸಮ್ಮಾನ್ ಯೋಜನೆಯಡಿಯಲ್ಲಿನ 2,000 ರೂ. ಹಣವನ್ನು ಮುಂಗಡವಾಗಿ ಕೊಡುವುದು, ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲ ಯೋಜನೆ 10 ಲಕ್ಷದಿಂದ 20 ಲಕ್ಷಕ್ಕೆ ಏರಿಸಿದ್ದು, ಇದರಿಂದ 63 ಲಕ್ಷ ಮಹಿಳಾ ಸ್ವಸಹಾಯ ಸಂಘಗಳಿಗೆ ಲಾಭವಾಗಲಿದೆ.
8.3 ಕೋಟಿ ಗೃಹಿಣಿಯರಿಗೆ ಉಜ್ವಲ್ ಯೋಜನೆ ಅಡಿ 3 ಉಚಿತ ಗ್ಯಾಸ್ ಸಿಲಿಂಡರ್ಗಳನ್ನು ನೀಡುವುದು, ಸಂಘಟಿತ ವಲಯದ ಕಾರ್ಮಿಕರಿಗೆ ಇ.ಪಿ.ಎಫ್. ಮೇಲೆ ಸಾಲ ಸೌಲಭ್ಯ ಮತ್ತು ಉದ್ಯೋಗ ಖಾತರಿ ಯೋಜನೆಯಡಿ ಕೂಲಿ ದರವನ್ನು 182ರಿಂದ 202 ರೂ.ಗೆ ಏರಿಸಿದ್ದು, ದೇಶದ ಬಡವರು ಇಂತಹ ಸಂದಿಗ್ಧ ಸಮಯದಲ್ಲಿ ಹಸಿವಿನಿಂದ ಬಳಲದಂತೆ ಮಾಡುತ್ತದೆ. ಇದರ ಜೊತೆಗೆ ವಯೋವೃದ್ಧರಿಗೆ, ವಿಧವೆಯರಿಗೆ 1000 ರೂ. ಗೌರವಧನವನ್ನು 3 ತಿಂಗಳವರೆಗೆ ಕೊಡುವುದು ಒಳ್ಳೆಯ ನಿರ್ಧಾರ ಎಂದು ಸಿಎಂ ಅಭಿಪ್ರಾಯಪಟ್ಟಿದ್ದಾರೆ.
ಕೇಂದ್ರ ಸರ್ಕಾರದಿಂದ ಉದ್ಯಮ ವಲಯಕ್ಕೆ ಹಲವಾರು ಹಣಕಾಸು ಸಹಾಯಕ ಯೋಜನೆಗಳನ್ನು ಕೊಡಮಾಡಿ ಕೋವಿಡ್-19 ಮಹಾಮಾರಿಯ ಪರಿಣಾಮದಿಂದ ಉಂಟಾದ ಆರ್ಥಿಕ ಬಿಕ್ಕಟ್ಟನ್ನು ಸರಿದೂಗಿಸುವಲ್ಲಿ ಸಹಕಾರಿಯಾಗಲಿದೆ. ಬಡವರಿಗೆ ಇಷ್ಟೊಂದು ದೊಡ್ಡಮಟ್ಟದ ಹಣಕಾಸು ಸಹಾಯ ಮಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಇನ್ನೊಮ್ಮೆ ಅಭಿನಂದಿಸುತ್ತೇನೆ ಎಂದು ಸಿಎಂ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.