ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ನಿಯಂತ್ರಣ ಹಾಗೂ ನಿರ್ವಹಣೆಗೆ ಅಳವಡಿಸಿರುವ ಟೆಸ್ಟಿಂಗ್, ಟ್ರಾಕಿಂಗ್, ಟ್ರೇಸಿಂಗ್, ಟ್ರಯಾಜಿಂಗ್ ಮತ್ತು ಟೆಕ್ನಾಲಜಿ ಬಳಕೆಯ 5 ಟಿ ಸೂತ್ರವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
![ವರ್ಚಯಲ್ ಸಭೆಯಲ್ಲಿ ಸಿಎಂ ಭಾಗಿ](https://etvbharatimages.akamaized.net/etvbharat/prod-images/kn-bng-10-cm-press-statement-regard-pm-meeting-script-7208080_13012022210513_1301f_1642088113_355.jpg)
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ನಡೆಸಿದ ವಿಡಿಯೋ ಸಂವಾದದಲ್ಲಿ ಭಾಗವಹಿಸಿದ ನಂತರ ಪತ್ರಿಕಾ ಹೇಳಿಕೆ ನೀಡಿರುವ ಮುಖ್ಯಮಂತ್ರಿಗಳು, ರಾಜ್ಯದಲ್ಲಿ ಕೋವಿಡ್ ನಿಯಂತ್ರಣ ಹಾಗೂ ನಿರ್ವಹಣೆಗಾಗಿ ಕೈಗೊಂಡಿರುವ ಕ್ರಮಗಳನ್ನು ಪ್ರಧಾನಿಯವರಿಗೆ ವಿವರಿಸಲಾಯಿತು. ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪರೀಕ್ಷೆ ನಡೆಸುತ್ತಿರುವ ಕುರಿತು ಹಾಗೂ ರಾಜ್ಯದಲ್ಲಿ ಲಸಿಕೆ ಹಾಕಿಸಿಕೊಂಡವರ ಪ್ರಮಾಣ ದೇಶದ ಸರಾಸರಿಗಿಂತ ಹೆಚ್ಚಿರುವ ಕುರಿತು ಪ್ರಧಾನಿಯವರು ಮೆಚ್ಚುಗೆ ವ್ಯಕ್ತಪಡಿಸಿದರು ಎಂದು ತಿಳಿಸಿದ್ದಾರೆ.
ಇದರೊಂದಿಗೆ ರಾಜ್ಯದಲ್ಲಿ ಆರೋಗ್ಯ ಮೂಲಸೌಕರ್ಯ ಅಭಿವೃದ್ಧಿಗೆ ಕೈಗೊಂಡಿರುವ ಕ್ರಮಗಳ ಕುರಿತು ಸಹ ಪ್ರಧಾನಿಯವರಿಗೆ ಮಾಹಿತಿ ನೀಡಲಾಯಿತು. ಆಕ್ಸಿಜನೇಟೆಡ್ ಬೆಡ್ಗಳು ಮತ್ತು ಆಕ್ಸಿಜನ್ ಪ್ಲಾಂಟ್ಗಳನ್ನು ಹೆಚ್ಚಿಸಲು ಕೇಂದ್ರದ ನೆರವು ಕೋರಲಾಯಿತು ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಕೋವಿಡ್ ಸಂಬಂಧ ಪ್ರಧಾನಿ ವರ್ಚುವಲ್ ಸಭೆ: ಸಿಎಂ ಬೊಮ್ಮಾಯಿ ಭಾಗಿ
ರಾಜ್ಯದಲ್ಲಿ ಹೋಂ ಐಸೊಲೇಷನ್ನಲ್ಲಿ ಇರುವವರ ಮೇಲ್ವಿಚಾರಣೆಗೆ ತಂತ್ರಜ್ಞಾನದ ಬಳಕೆಯನ್ನು ಪ್ರಧಾನಿಯವರು ಶ್ಲಾಘಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಅಲೆ ಫೆಬ್ರವರಿ ತಿಂಗಳಲ್ಲಿ ಅತ್ಯಂತ ತೀವ್ರಗೊಳ್ಳುವ ನಿರೀಕ್ಷೆಯಿದ್ದು, ಮೊದಲ ಹಾಗೂ ಎರಡನೇ ಅಲೆಯನ್ನು ಎದುರಿಸಿದ ಅನುಭವದ ಆಧಾರದಲ್ಲಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಸೂಚಿಸಿದರು ಎಂದಿದ್ದಾರೆ.
ಮೂರನೇ ಅಲೆಯ ಸಂದರ್ಭದಲ್ಲಿ ಶೇ. 94ಕ್ಕೂ ಹೆಚ್ಚು ಸೋಂಕಿತರು ಹೋಮ್ ಐಸೊಲೇಷನ್ನಲ್ಲಿ ಇದ್ದಾರೆ. ಆದ್ದರಿಂದ ಅವರಲ್ಲಿ ವಿಶ್ವಾಸ ಮೂಡಿಸುವ ಹಾಗೂ ಅವರಿಗೆ ಔಷಧ ಪೂರೈಕೆಯೂ ಸೇರಿದಂತೆ ಸೂಕ್ತ ಆರೈಕೆಯನ್ನು ಖಾತರಿಪಡಿಸಲು ಆದ್ಯತೆ ನೀಡುವಂತೆ ಪ್ರಧಾನಿಯವರು ತಿಳಿಸಿದ್ದಾರೆ. ಭಾರತ ಸರ್ಕಾರವು ಹೆಚ್ಚಿನ ಪರೀಕ್ಷೆ ನಡೆಸುವಂತೆ ಹಾಗೂ ಕೇಂದ್ರ ಸರ್ಕಾರ ಒದಗಿಸಿರುವ 23,000 ಕೋಟಿ ರೂ. ಪ್ಯಾಕೇಜ್ನಡಿ ಆ್ಯಂಬುಲೆನ್ಸ್ ಹಾಗೂ ಆರೋಗ್ಯ ಮೂಲಸೌಕರ್ಯ ಹೆಚ್ಚಿಸಲು ಕ್ರಮ ವಹಿಸುವಂತೆ ಸಲಹೆ ನೀಡಿದ್ದಾರೆ ಎಂದು ಮುಖ್ಯಮಂತ್ರಿಯವರು ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ಎಲ್ಲ ರಾಜ್ಯ ಸರ್ಕಾರಗಳಿಗೆ 32 ಸಾವಿರ ಕೋಟಿ ಹಣವನ್ನು ಆರೋಗ್ಯ ಮೂಲಭೂತ ಸೌಕರ್ಯಕ್ಕಾಗಿ ಒದಗಿಸಿದೆ. ಹಲವು ರಾಜ್ಯಗಳು ಇನ್ನೂ ಇದರ ಪ್ರಯೋಜನ ಪಡೆದಿಲ್ಲ. ಆರೋಗ್ಯ ಮೂಲಭೂತ ಸೌಕರ್ಯಗಳಾದ ಐಸಿಯು, ಆಕ್ಸಿಜನ್ ಪ್ಲಾಂಟ್, ಆಕ್ಸಿಜಿನೆಟೆಡ್ ಬೆಡ್ ಹಾಗೂ ಅಂಬುಲೆನ್ಸ್ ಸೇರಿದಂತೆ ಇತರ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲು ರಾಜ್ಯಗಳು ಸಹ ತಮ್ಮ ಪಾಲನ್ನು ಸೇರಿಸಿ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬೇಕಾಗಿದೆ ಎಂದು ಪ್ರಧಾನಿ ಸಲಹೆ ಕೊಟ್ಟಿರುವುದಾಗಿ ಸಿಎಂ ತಿಳಿಸಿದ್ದಾರೆ.