ಬೆಂಗಳೂರು: ಸಿಲಿಕಾನ್ ಸಿಟಿಯ ತುಂಬೆಲ್ಲ ಹಲವು ಪಾರ್ಕ್ಗಳನ್ನು ಮಾಡಿ ಅದರ ನಿರ್ವಹಣೆ ಮಾಡದೇ ಪಾಲಿಕೆ ಹಾಗೆಯೇ ಬಿಟ್ಟಿದೆ. ಈಗ ವಿವಾದದ ಫ್ಲೈ ಓವರ್ ಆಗಿರುವ ಶಿವಾನಂದ ಮೇಲ್ಸೇತುವೆ ಕೆಳಗೆ ಕೋಟಿ ಕೋಟಿ ಖರ್ಚು ಮಾಡಿ ಪ್ಲೇ ಏರಿಯಾ ರೆಡಿ ಮಾಡಲು ಬಿಬಿಎಂಪಿ ಹೊರಟಿರುವುದು ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ.
ಈಗಾಗಲೇ ಕೋಟಿ ಕೋಟಿ ಖರ್ಚು ಮಾಡಿ ನಿರ್ಮಾಣ ಮಾಡಿರುವ ಪಾರ್ಕ್, ಪಬ್ಲಿಕ್ ಜಿಮ್ಗಳು ಸೂಕ್ತ ರೀತಿಯಲ್ಲಿ ಉಪಯೋಗಕ್ಕೆ ಬಾರದೆ ಹಾಗೆಯೇ ಬಿದ್ದಿವೆ. ಈಗ ಅಂಥದ್ದೇ ಒಂದು ಹೊಸ ಸ್ಕೀಮ್ಗೆ ಬಿಬಿಎಂಪಿ ಮುಂದಾಗಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿ ಕೊಟ್ಟಿದೆ.
ವಾಹನಗಳ ಸಂಚಾರ ಪ್ರಾರಂಭ: ಶಿವಾನಂದ ಸರ್ಕಲ್ ಸ್ಟೀಲ್ ಬ್ರಿಡ್ಜ್ ಸಂಚಾರಕ್ಕೆ ಓಪನ್ ಆಗಿ ಹಲವು ಕಡೆಗಳಿಂದ ಟೀಕೆಗೆ ಗುರಿಯಾಗಿತ್ತು. ಮೇಲ್ಸೇತುವೆ ಅವೈಜ್ಞಾನಿಕವಾಗಿದೆ ಎಂದು ಹಲವು ಚರ್ಚೆಗಳು ನಡೆದಿದ್ದವು. ಕೊನೆಗೂ ಈಗ ಫ್ಲೈ ಓವರ್ ಮೇಲೆ ವಾಹನಗಳ ಸಂಚಾರ ಪ್ರಾರಂಭ ಆಗಿದೆ. ಆದರೆ, ಇದೀಗ ಅಲ್ಲಿ ಹೊಸ ಸ್ಕೀಮ್ನನ್ನು ಪಾಲಿಕೆ ಹುಡುಕಿದ್ದು, ಒಟ್ಟು 3 ಕೋಟಿ ರೂಪಾಯಿ ಯೋಜನೆ ಸಿದ್ಧಪಡಿಸಿಟ್ಟುಕೊಂಡಿದೆ.
ಅಂತಾರಾಷ್ಟ್ರೀಯ ದರ್ಜೆಯ ಬಾಸ್ಕೆಟ್ ಬಾಲ್ ಕೋರ್ಟ್: ಶಿವಾನಂದ ಸರ್ಕಲ್ ಫ್ಲೈ ಓವರ್ ಕೆಳಗೆ 3 ಕೋಟಿ ರೂಪಾಯಿ ವೆಚ್ಚದಲ್ಲಿ ಪ್ಲೇ ಏರಿಯಾ ನಿರ್ಮಾಣ ಮಾಡಲು ಮುಂದಾಗಿದ್ದೇವೆ. ಅಂತಾರಾಷ್ಟ್ರೀಯ ದರ್ಜೆಯ ಬಾಸ್ಕೆಟ್ ಬಾಲ್ ಸ್ಕೇಟಿಂಗ್ ಏರಿಯಾ, ಸಾರ್ವಜನಿಕ ಶೌಚಾಲಯ, ವಾಕಿಂಗ್ ಬೇ ಇರಲಿದೆ ಎಂದು ಪಾಲಿಕೆ ಕೇಂದ್ರ ವಿಭಾಗದ ಮುಖ್ಯ ಅಭಿಯಂತರರಾದ ಲೋಕೇಶ್ ತಿಳಿಸಿದ್ದಾರೆ.
ಲೂಟಿ ಮಾಡುವ ಯೋಜನೆ: ಈ ಯೋಜನೆಯ ಕುರಿತು ಸಾಮಾಜಿಕ ಕಾರ್ಯಕರ್ತ ಸಾಯಿ ದತ್ತ ಮಾತನಾಡಿದ್ದು, ಬಿಬಿಎಂಪಿ ಅಧಿಕಾರಿಗಳು ಹಣ ಲೂಟಿ ಮಾಡಲು ಈ ಕಾಮಗಾರಿ ಕೈಗೆತ್ತಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಸೇತುವೆ ಕೆಳಗೆ ಮಕ್ಕಳ ಆಟದ ಮೈದಾನ ಮೂರ್ಖತನ: ಈಗಾಗಲೇ ನಗರದ ಹಲವು ಭಾಗದಲ್ಲಿ ಪಾಲಿಕೆಗೆ ಸೇರಿದ ಹಲವು ಮೈದಾನಗಳು, ಪಾರ್ಕ್ಗಳಿವೆ. ಅದನ್ನು ನಿರ್ವಹಣೆ ಮಾಡಿ ಮೇಲ್ದರ್ಜೆಗೆ ಏರಿಸಿ, ಅಲ್ಲಿ ಪ್ಲೇ ಏರಿಯಾ ನಿರ್ಮಾಣ ಮಾಡಬೇಕು. ಟ್ರಾಫಿಕ್ ಇರುವ ಕಡೆ ಮಕ್ಕಳಿಗೆ ಆಟ ಆಡಲು ಜಾಗ ಮಾಡಿಕೊಡುತ್ತೇವೆ ಎನ್ನುವುದು ಮೂರ್ಖತನ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಶಿವಾನಂದ ಸ್ಟೀಲ್ ಬ್ರಿಡ್ಜ್ ಓಪನ್: ಸದ್ಯ ಒಂದು ಬದಿ ಓಡಾಟ, ಆ.30ಕ್ಕೆ ಟೂ ವೇ ಸಂಚಾರ
ಲೂಟಿ ಮಾಡಲು ಹೊಸ ಸ್ಕೀಮ್: ಈಗಾಗಲೇ ಬೆಂಗಳೂರನ್ನು ಮೇಲ್ದರ್ಜೆಗೇರಿಸಲು ಸ್ಮಾರ್ಟ್ ಸಿಟಿ ಯೋಜನೆಯಡಿ ವಿಶೇಷವಾಗಿ ಕೆಲಸಗಳು ನಡೆಯುತ್ತಿವೆ. ಬಿಬಿಎಂಪಿ ಇರುವ ಯೋಜನೆಯನ್ನು ಉಳಿಸಿಕೊಂಡು ಹೋದರೆ ಸಾಕು. ಆದರೆ ಪಾಲಿಕೆ ಅಧಿಕಾರಿಗಳು ತಿಂಗಳಿಗೊಮ್ಮೆ ಕೋಟಿ ಕೋಟಿ ವೆಚ್ಚದಲ್ಲಿ ಹೊಸ ಹೊಸ ಯೋಜನೆ ಜಾರಿ ಮಾಡಿ ತಿಂದು ಹೋದ ಕೊಂಡು ಹೋದ ಅಪಖ್ಯಾತಿಯನ್ನು ತನ್ನಲ್ಲೇ ಉಳಿಸಿಕೊಳ್ಳಲು ಶತ ಪ್ರಯತ್ನ ಮಾಡುತ್ತಿದ್ದಾರೆ. ಈ ಮೂಲಕ ಜನರ ತೆರಿಗೆ ದುಡ್ಡು ಸುಖಾಸುಮ್ಮನೆ ಪೋಲಾಗುತ್ತಿದೆ ಎಂದು ಟೀಕೆಗಳು ಕೇಳಿ ಬಂದಿವೆ.