ಬೆಂಗಳೂರು: ಪ್ರಯಾಣಿಕರು ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಬಾಟಲಿಗಳನ್ನು ಎಸೆಯುವುದರಿಂದ ಉಂಟಾಗುತ್ತಿರುವ ಪರಿಸರ ಮಾಲಿನ್ಯ ನಿಯಂತ್ರಿಸಲು ಕೆಎಸ್ಆರ್‌ಟಿಸಿ ಮುಂದಾಗಿದ್ದು ಮೊದಲ ಹಂತವಾಗಿ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಪ್ಲಾಸ್ಟಿಕ್ ಬಾಟಲ್ ಕ್ರಷ್ ಯಂತ್ರವನ್ನು ಅಳವಡಿಸಲಾಗಿದೆ.
ಹವಾನಿಯಂತ್ರಿತ ಬಸ್ಗಳಲ್ಲಿ ಪ್ಲಾಸ್ಟಿಕ್ ನೀರಿನ ಬಾಟಲ್ ವಿತರಣೆ ಸ್ಥಗಿತಗೊಳಿಸಿದ್ದ ಕೆಎಸ್ಆರ್‌ಟಿಸಿ, ಇದೀಗ ಪ್ಲಾಸ್ಟಿಕ್ ಬಾಟಲ್ ಕ್ರಷ್ ಯಂತ್ರವನ್ನು ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಪರಿಚಯಿಸಿದೆ. ಕೆಎಸ್ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ.ಸಿ.ಕಳಸದ ಪ್ಲಾಸ್ಟಿಕ್ ಬಾಟಲ್ ಕ್ರಷ್ ಮಾಡಿ ಮರುಬಳಕೆ ಮಾಡುವ ಯಂತ್ರವನ್ನು ಉದ್ಘಾಟಿಸಿದರು.
ಯಂತ್ರದ ಉಪಯೋಗ :
ಈ ಯಂತ್ರವು ಪ್ರತಿ ದಿನ ಕನಿಷ್ಠ 4,500 ಪ್ಲಾಸ್ಟಿಕ್ ಬಾಟಲಿಗಳನ್ನು ಕ್ರಷ್ ಮಾಡಲಿದ್ದು, ಒಂದು ವರ್ಷಕ್ಕೆ 17.2 ಟನ್ ಪ್ಲಾಸ್ಟಿಕ್ ತ್ಯಾಜ್ಯ ಈ ಯಂತ್ರದಿಂದ ಮರುಬಳಕೆ ಆಗಲಿದೆ. ಇದರಿಂದ ರಸ್ತೆ, ಶೌಚಾಲಯದ ಕ್ಯಾಬಿನ್, ಕಸದ ಬುಟ್ಟಿಗಳು, ದಿನಚರಿ ಪುಸ್ತಕ, ಟಿ-ಶರ್ಟ್ ಗಳನ್ನು ತಯಾರಿಸಬಹುದಾಗಿದೆ. 4.3 ಲಕ್ಷ ರೂ. ಗಳ ವೆಚ್ಚದ ಯಂತ್ರವನ್ನು ಗ್ರೀನ್ ಸೈಕ್ಲೋ ಪಾಸ್ಟ್ ಮತ್ತು ಸ್ಪರ್ಶ ಮಸಾಲಾರವರ ಸಾಮಾಜಿಕ ಹೊಣೆಗಾರಿಕೆ(CSR) ಅಡಿ ಕಾರ್ಯಗತಗೊಳಿಸಲಾಗಿದೆ. ನಿಗಮವು ಉಚಿತ ಸ್ಥಳಾವಕಾಶ ಮತ್ತು ವಿದ್ಯುತ್ ವೆಚ್ಚವನ್ನು ಭರಿಸಲಿದ್ದು, ಪರಿಸರ ಸ್ನೇಹಿ ಕಾರ್ಯಕ್ರಮಗಳಡಿ ಈ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತಂದಿದೆ.