ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ನಿಷೇಧಿತ ಪ್ಲಾಸ್ಟಿಕ್ ಬಳಸುತ್ತಿದ್ದರೆ, ಅಂತ ಅಂಗಡಿ, ಮುಂಗ್ಗಟ್ಟುಗಳ ಮೇಲೆ ಆ.1ರಿಂದ ಐದು ಪಟ್ಟ ದಂಡ ಹೆಚ್ಚಿಸಲಾಗಿದೆ ಎಂದು ಬಿಬಿಎಂಪಿ ಮೇಯರ್ ಗಂಗಾಂಬಿಕಾ ತಿಳಿಸಿದರು.
ಇಲ್ಲಿನ ಬಿಬಿಎಂಪಿ ವ್ಯಾಪ್ತಿಯ 198 ವಾರ್ಡ್ಗಳ ಆರೋಗ್ಯಾಧಿಕಾರಿ, ಕಿರಿಯ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಜತೆ ಬುಧವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮೇಯರ್ ಎಲ್ಲರಿಗೂ ಖಡಕ್ ಸೂಚನೆ ನೀಡಿದರು.
ಕಾನೂನು ಚೌಕಟ್ಟು ಮೀರಿ ಯಾವುದೇ ಕ್ರಮಗಳನ್ನು ಅಧಿಕಾರಿಗಳು ಕೈಗೊಳ್ಳಬಾರದು. ಬದಲಾವಣೆಯಾದ ನಿಯಮಗಳನ್ನು ಬೈಲಾದಲ್ಲಿ ಅಳವಡಿಸುವವರೆಗೂ ಎಚ್ಚರಿಕೆ ವಹಿಸಿಬೇಕು. ಪ್ಲಾಸ್ಟಿಕ್ ನಿಷೇಧವೂ ಪರಿಣಾಮಕಾರಿಯಾಗಿ ಜಾರಿ ಮಾಡುವ ಉದ್ದೇಶದಿಂದ ಜುಲೈ 15 ರಿಂದ ಬೃಹತ್ ಆಂದೋಲನ ನಡೆಯುತ್ತಿದೆ. ಐದು ಪಟ್ಟು ದಂಡ ವಿಧಿಸುವ ಹಾಗೂ ಪರವಾನಗಿ ರದ್ದು ಅಧಿಕಾರವಿದೆ ಎಂದು ಹೇಳಿದರು.
ದಾಳಿ ನಡೆಸುವ ವೇಳೆ ತೊಂದರೆಯಾದರೆ ಪೊಲೀಸ್ ಅಥವಾ ಮಾರ್ಷಲ್‌ಗಳ ಸಹಕಾರದಲ್ಲಿ ಪ್ಲಾಸ್ಟಿಕ್ ಜಪ್ತಿ ಮಾಡಬೇಕು. ಪ್ಲಾಸ್ಟಿಕ್ ಮುಕ್ತ ಬೆಂಗಳೂರನ್ನಾಗಿ ಮಾಡುವುದೇ ಪಾಲಿಕೆಯ ಗುರಿ ಎಂದು ಮೇಯರ್ ತಿಳಿಸಿದರು.
ಡೆಂಗಿ ಪ್ರಕರಣ: ಡೆಂಗಿ ಪ್ರಕರಣಗಳು ನಗರದಲ್ಲಿ ಹೆಚ್ಚುತ್ತಿದ್ದು, ಈಗಾಗಲೇ 3,700 ಪ್ರಕರಣಗಳು ದಾಖಲಾಗಿದೆ. ಫಾಗಿಂಗ್ ಹಾಗೂ ಔಷಧಗಳ ಸಿಂಪಡಣೆ ಗುತ್ತಿಗೆ ಪಡೆದವರು ಗುರುತಿಸಲಾದ ವಾರ್ಡ್ಗಳಲ್ಲಿ ಕೂಡಲೇ ಸೂಕ್ತಕ್ರಮ ತೆಗೆದುಕೊಳ್ಳಬೇಕು.
100ಕ್ಕೂ ಹೆಚ್ಚು ಡೆಂಗಿ ಪ್ರಕರಣ ದಾಖಲಾಗಿರುವ 10 ವಾರ್ಡ್ಗಳು ಹಾಗೂ 50ಕ್ಕೂ ಹೆಚ್ಚು ಡೆಂಗಿ ಪ್ರಕರಣ ದಾಖಲಾಗಿರುವ 15 ವಾರ್ಡ್ಗಳ ಪಟ್ಟಿ ಸಿದ್ಧವಾಗಿದೆ. ಅದರಂತೆ ಗುತ್ತಿಗೆದಾರರು ಶೀಘ್ರವೇ ಕ್ರಮಕ್ಕೆ ಮುಂದಾಗಬೇಕು ಎಂದು ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು.