ಬೆಂಗಳೂರು: ಪ್ಲಾಸ್ಟಿಕ್ ಬಳಕೆ ಮಾಡಿದರೆ ದಂಡ ವಿಧಿಸಲಾಗುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿದ್ದ ಬಿಬಿಎಂಪಿ ಮೇಯರ್ ಗಂಗಾಂಬಿಕೆ ಅವರೇ ಪ್ಲಾಸ್ಟಿಕ್ ಬಳಸಿ ದಂಡ ಪಾವತಿಸಿದ್ದಾರೆ.
ಇದು ನನಗೆ ಗೊತ್ತಿದ್ದೂ ಆದ ತಪ್ಪಲ್ಲ. ಪ್ಲಾಸ್ಟಿಕ್ ನಿಷೇಧಕ್ಕೆ ಆಗ್ರಹಿಸುತ್ತಾ ಬಂದಿದ್ದೇನೆ. ಎಲ್ಲ ಹಂತಗಳಲ್ಲಿ ಪ್ಲಾಸ್ಟಿಕ್ ಬಳಕೆ ರದ್ದಾಗಬೇಕು ಎಂಬ ಮನೋಭಾವದಲ್ಲಿ ಈ ಆಂದೋಲನ ಆರಂಭಿಸಿದೆ. ನನ್ನಿಂದ ತಪ್ಪಾಗಿದೆ ಎಂಬ ಭಾವನೆ ನನಗೆ ಬಂದಿದೆ. ಹೀಗಾಗಿ, ನಿಯಮ ಉಲ್ಲಂಘಿಸಿದ್ದಕ್ಕೆ 500 ರೂ. ದಂಡ ಪಾವತಿಸಿದ್ದೇನೆ. ಒಂದು ಒಳ್ಳೆಯ ಅಭಿಯಾನ ನನ್ನಿಂದಲೇ ಆರಂಭವಾಗಲಿ ಎಂದು ಮೇಯರ್ ಗಂಗಾಂಬಿಕೆ ಹೇಳಿದರು.
ಘಟನೆ ಹಿನ್ನೆಲೆ:
ನೂತನ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದ ವೇಳೆ ಮೇಯರ್ ಗಂಗಾಂಬಿಕೆ ಅವರು ತಮ್ಮ ಶುಭಾಶಯದೊಂದಿಗೆ ಡ್ರೈಫ್ರೂಟ್ಸ್ ಬುಟ್ಟಿಯೊಂದನ್ನು ನೀಡಿದ್ದರು. ಬುಟ್ಟಿಯ ಮೇಲ್ಭಾಗ ಪ್ಲಾಸ್ಟಿಕ್ ಕವರ್ನಿಂದ ಮುಚ್ಚಲಾಗಿತ್ತು. ಈ ಭೇಟಿ ವೇಳೆಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ, ಮೇಯರ್ ನಡೆಯ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ಇದರಿಂದ ಎಚ್ಚೆತ್ತ ಮೇಯರ್, ನಿಯಮ ಉಲ್ಲಂಘಿಸಿದಕ್ಕಾಗಿ 500 ರೂ. ದಂಡ ಕಟ್ಟಿದ್ದರು. ನಿಯಮ ಉಲ್ಲಂಘಿಸಿದಕ್ಕೆ ಕ್ಷಮೆಯಾಚಿಸಿ, ಬಿಬಿಎಂಪಿಯ ಆರೋಗ್ಯ ಇಲಾಖೆಯ ಕಚೇರಿಗೆ ತೆರಳಿ ದಂಡ ಕಟ್ಟಿದ್ದಾರೆ.