ಬೆಂಗಳೂರು : ರಾಜ್ಯ ಸರ್ಕಾರ ಜಾರಿಗೆ ತಂದಿರುವ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ-2020 ಸುಗ್ರೀವಾಜ್ಞೆಯನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.
ನಗರದ ಸಾಮಾಜಿಕ ಕಾರ್ಯಕರ್ತ ಆರೀಫ್ ಜಮೀಲ್ ಎಂಬುವವರು ಈ ಪಿಐಎಲ್ ಸಲ್ಲಿಸಿದ್ದು, ಸುಗ್ರೀವಾಜ್ಞೆಯನ್ನು ಅಸಂವಿಧಾನಿಕ ಎಂದು ಘೋಷಿಸಬೇಕು ಮತ್ತು ರದ್ದುಪಡಿಬೇಕು ಎಂದು ಕೋರಿದ್ದಾರೆ. ಹಾಗೆಯೇ ಅರ್ಜಿ ಇತ್ಯರ್ಥವಾಗುವವರೆಗೆ ಸುಗ್ರೀವಾಜ್ಞೆ ಜಾರಿ ಮಾಡದಂತೆ ತಡೆಯಾಜ್ಞೆ ನೀಡುವಂತೆ ಮಧ್ಯಂತರ ಮನವಿ ಮಾಡಿದ್ದಾರೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ರಹಮತ್ ಉಲ್ಲಾ ಕೊತ್ವಾಲ್ ವಾದಿಸಿ, ಅರ್ಜಿಯಲ್ಲಿರುವ ವಿಚಾರಗಳು ಅತ್ಯಂತ ಗಂಭೀರವಾಗಿದ್ದು, ತುರ್ತು ವಿಚಾರಣೆ ನಡೆಸಬೇಕು ಎಂದು ಕೋರಿದರು. ಇದಕ್ಕೆ ಆಕ್ಷೇಪಿಸಿದ ಪೀಠ, ಅರ್ಜಿ ಸಲ್ಲಿಸಲು ಮತ್ತು ವಿಚಾರಣೆಗೆ ಪರಿಗಣಿಸಲು ಅದರದೇ ಆದ ಪ್ರಕ್ರಿಯೆ ಇದೆ. ಪಿಐಎಲ್ ಅರ್ಜಿಗಳು ಸಲ್ಲಿಕೆಯಾದ ಏಳು ದಿನಗಳ ಒಳಗೆ ವಿಚಾರಣೆಗೆ ನಿಗದಿಯಾಗಲಿದೆ. ಈಗಲೇ ವಿಚಾರಣೆ ಪರಿಗಣಿಸುವ ತುರ್ತು ಅಗತ್ಯವೇನಿದೆ ಎಂದು ಪ್ರಶ್ನಿಸಿತು.
ಇದಕ್ಕೆ ಉತ್ತರಿಸಿದ ವಕೀಲರು, ರಾಜ್ಯಪಾಲರ ಒಪ್ಪಿಗೆ ಮೇರೆಗೆ ಸರ್ಕಾರ ಮಂಗಳವಾರ ಸುಗ್ರೀವಾಜ್ಞೆ ಹೊರಡಿಸಿದೆ. ಇದರಿಂದಾಗಿ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣೆ ವಿಧೇಯಕದ ನಿಯಮಗಳು ಜಾರಿಗೆ ಬಂದಿದ್ದು, ಸಮಾಜದಲ್ಲಿ ಗೊಂದಲ ಹಾಗೂ ಸಂಘರ್ಷ ನಿರ್ಮಾಣವಾಗುವ ಸಾಧ್ಯತೆಯಿದೆ. ಹೀಗಾಗಿ ತುರ್ತಾಗಿ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಬೇಕು ಎಂದು ಕೋರಿದರು. ವಾದ ಒಪ್ಪದ ಪೀಠ, ಅರ್ಜಿ ಪ್ರಕ್ರಿಯೆಯಂತೆ ವಿಚಾರಣೆಗೆ ಬರಲಿ ಎಂದು ಸೂಚಿಸಿತು.
ಅರ್ಜಿದಾರರ ಕೋರಿಕೆ :
ರಾಜ್ಯದಲ್ಲಿ ಎಲ್ಲಾ ವಯಸ್ಸಿನ ಆಕಳು, ಕರು, ಗೂಳಿ, ಎತ್ತು ಹಾಗೂ 13 ವರ್ಷದೊಳಗಿನ ಕೋಣ ಅಥವಾ ಎಮ್ಮೆಗಳ ಹತ್ಯೆಯನ್ನು ನಿಷೇಧಿಸಲು ಸರ್ಕಾರ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ-2020 ನ್ನು ರೂಪಿಸಿದೆ. ಕಳೆದ ಡಿ.9 ರಂದು ಮಂಡಿಸಿದಾಗ, ವಿಧಾನಸಭೆಯಲ್ಲಿ ವಿಧೇಯಕಕ್ಕೆ ಅಂಗೀಕಾರ ದೊರೆಯಿತಾದರೂ, ವಿಧಾನ ಪರಿಷತ್ತಿನಲ್ಲಿ ಅನುಮೋದನೆ ದೊರೆತಿರಲಿಲ್ಲ. ಈ ಹಿನ್ನೆಲೆಯಲ್ಲಿ ಸುಗ್ರೀವಾಜ್ಞೆ ಮೂಲಕ ನಿಯಮ ಜಾರಿ ಮಾಡಲು ರಾಜ್ಯಪಾಲರ ಒಪ್ಪಿಗೆ ಕೋರಿತ್ತು.
ರಾಜ್ಯಪಾಲರು ಒಪ್ಪಿಗೆ ನೀಡಿದ್ದರಿಂದ ಸರ್ಕಾರ ಮಂಗಳವಾರ ಸುಗ್ರೀವಾಜ್ಞೆ ಹೊರಡಿಸಿತ್ತು. ಇದನ್ನು ಪ್ರಶ್ನಿಸಿರುವ ಅರ್ಜಿದಾರರು, 1964 ರಿಂದ ಕರ್ನಾಟಕದಲ್ಲಿ ಜಾನುವಾರು ಸಂರಕ್ಷಣೆ ಮತ್ತು ಗೋ ಹತ್ಯೆ ತಡೆ ಕಾಯ್ದೆ ಜಾರಿಯಲ್ಲಿದೆ. ಹೀಗಾಗಿ, ಜಾನುವಾರು ರಕ್ಷಣೆ ಹೆಸರಿನಲ್ಲಿ ಸುಗ್ರೀವಾಜ್ಞೆ ಅಗತ್ಯವೇನಿಲ್ಲ.
ರಾಜ್ಯದ ಈ ಸುಗ್ರೀವಾಜ್ಞೆ ಸಂವಿಧಾನದ ಮೂಲ ತತ್ವ ಹಾಗೂ ಅಶಯಗಳಿಗೆ ವಿರುದ್ಧವಾಗಿದೆ. ಮುಸ್ಲಿಂರು, ದಲಿತರ ಮತ್ತು ಇತರೆ ಅಲ್ಪಸಂಖ್ಯಾತರ ಆಹಾರದ ಹಕ್ಕನ್ನು ಕಸಿದುಕೊಳ್ಳಲಿದೆ. ವಿಧಾನಪರಿಷತ್ತಿನಲ್ಲಿ ಅಂಗೀಕಾರ ದೊರೆಯದೇ ಹೋದರೂ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿರುವುದು ಏಕಪಕ್ಷೀಯ ಮತ್ತು ತಾರತಮ್ಯದಿಂದ ಕೂಡಿದೆ. ಸಂವಿಧಾನ ಆಶಯ ಹಾಗೂ ಮಾನವ ಹಕ್ಕುಗಳ ಉಲ್ಲಂಘನೆ ಮಾಡುವ ಸುಗ್ರೀವಾಜ್ಞೆಯನ್ನು ರದ್ದುಪಡಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.