ಬೆಂಗಳೂರು: ಕೊರೊನಾ ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷದ ಆಸ್ತಿ ತೆರಿಗೆ ಪಾವತಿಯಿಂದ ವಿನಾಯಿತಿ ನೀಡುವಂತೆ ನಿರ್ದೇಶಿಸಲು ಕೋರಿ ಸಲ್ಲಿರುವ ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.
ಈ ಕುರಿತು ವಕೀಲ ಗುರುದತ್ತ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಅರ್ಜಿದಾರರ ವಕೀಲ ಎನ್.ಪಿ. ಅಮೃತೇಶ್ ಪೀಠಕ್ಕೆ ಮಾಹಿತಿ ನೀಡಿ, ಆಸ್ತಿ ತೆರಿಗೆ ವಿನಾಯಿತಿ ನೀಡುವಂತೆ ಸಲ್ಲಿಸಿರುವ ಅರ್ಜಿಯನ್ನು ಕಾನೂನು ರೀತಿ ಪರಿಗಣಿಸುವಂತೆ ಹಿಂದಿನ ವಿಚಾರಣೆ ವೇಳೆ ನ್ಯಾಯಾಲಯ ಸೂಚಿಸಿತ್ತು. ಆದರೆ ಸರ್ಕಾರ ಮನವಿಯನ್ನು ತಿರಸ್ಕರಿಸಿದೆ ಎಂದು ಹೇಳಿದರು.
ಅಲ್ಲದೇ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಶ್ರಮಿಕ ವರ್ಗಕ್ಕೆ ಮತ್ತು ಉದ್ದಿಮೆಗಳಿಗೆ ಹಲವು ವಿಶೇಷ ಪ್ಯಾಕೇಜ್ಗಳನ್ನು ನೀಡಿವೆ. ಆದರೆ ಮಧ್ಯಮ ವರ್ಗದ ಕಟ್ಟಡಗಳ ಮಾಲೀಕರಿಗೆ ಯಾವುದೇ ಸೌಲಭ್ಯ ನೀಡಿಲ್ಲ.
ಪ್ರಸ್ತುತ ನಗರದಾದ್ಯಂತ ಮನೆ, ಅಂಗಡಿಗಳು ಖಾಲಿ ಇರುವ ಟು-ಲೆಟ್ ನಾಮಫಲಕಗಳು ಕಾಣಿಸುತ್ತಿವೆ. ಪ್ರಸ್ತುತ ವಾಣಿಜ್ಯ ಮತ್ತು ವಸತಿ ಕಟ್ಟಡಗಳ ಮಾಲೀಕರು ಸಂಕಷ್ಟದಲ್ಲಿದ್ದಾರೆ ಎಂದು ವಿವರಿಸಿ, ಮನೆ ಮುಂಭಾಗಗಳಲ್ಲಿ ಟು-ಲೆಟ್ ಬೋರ್ಡ್ ಅಳವಡಿಸಿರುವ ಫೋಟೋಗಳನ್ನು ಪೀಠಕ್ಕೆ ಸಲ್ಲಿಸಿದರು.
ವಾದ ಆಲಿಸಿದ ಪೀಠ, ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಸರ್ಕಾರದ ಪರ ವಕೀಲರಿಗೆ ಸೂಚಿಸಿ, ವಿಚಾರಣೆಯನ್ನು ಸೆಪ್ಟೆಂಬರ್ 15ಕ್ಕೆ ಮುಂದೂಡಿತು.