ಬೆಂಗಳೂರು: ನಗರದ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ತನ್ನ ಠೇವಣಿದಾರರ ಹಣ ದುರ್ಬಳಕೆ ಮಾಡಿಕೊಂಡಿರುವ ಆರೋಪ ಪ್ರಕರಣದ ತನಿಖೆ ನಡೆಸಲು ವಿಶೇಷ ತಂಡ (ಎಸ್ಐಟಿ) ರಚಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಬ್ಯಾಂಕ್ ಅಕ್ರಮ ಪ್ರಕರಣವನ್ನು ಡಿಐಜಿ ಹಂತದ ಅಧಿಕಾರಿ ನೇತೃತ್ವದ ವಿಶೇಷ ತನಿಖಾ ತಂಡಕ್ಕೆ ವಹಿಸಬೇಕು ಎಂದು ಕೋರಿ ಬಸವನಗುಡಿಯ ಕೆ.ಅರ್.ನರಸಿಂಹಮೂರ್ತಿ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಕೆಲ ಕಾಲ ವಾದ ಆಲಿಸಿದ ಪೀಠ, ಪ್ರತಿವಾದಿಗಳಾದ ಸಹಕಾರ ಇಲಾಖೆ, ಆರ್ಬಿಐ, ನಗರ ಪೊಲೀಸ್ ಆಯುಕ್ತ, ಬಸವನಗುಡಿ ಠಾಣೆ ಇನ್ಸ್ಪೆಕ್ಟರ್, ಬ್ಯಾಂಕ್ ಅಧ್ಯಕ್ಷ ಹಾಗೂ ಆಡಳಿತಾಧಿಕಾರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಜೂ. 16ಕ್ಕೆ ಮುಂದೂಡಿತು. ಇದೇ ವೇಳೆ ಪ್ರಕರಣದ ತನಿಖಾ ವರದಿಯನ್ನು ಮುಂದಿನ ವಿಚಾರಣೆ ಸಂದರ್ಭದಲ್ಲಿ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುವಂತೆ ಬಸವನಗುಡಿ ಠಾಣೆ ಪೊಲೀಸರಿಗೆ ಸೂಚಿಸಿತು. ಅರ್ಜಿದಾರರ ಪರ ವೆಂಕಟೇಶ್ ದಳವಾಯಿ ವಾದ ಮಂಡಿಸಿದರು.
ಅರ್ಜಿಯಲ್ಲಿ, ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಲಿಮಿಟೆಡ್ನಲ್ಲಿ 44 ಸಾವಿರ ಠೇವಣಿದಾರರಿದ್ದು, 253 ಕೋಟಿ ರೂಪಾಯಿ ಠೇವಣಿ ಹಣ ಇರಿಸಿದ್ದಾರೆ. ಆದರೆ ಬ್ಯಾಂಕ್ ಸೂಕ್ತ ದಾಖಲೆಗಳನ್ನು ಹೊಂದಿರದ ನಕಲಿ ಖಾತೆದಾರರು ಮತ್ತು ಅನುಮಾನಾಸ್ಪದ ವ್ಯಕ್ತಿಗಳಿಗೆ 1650 ಕೋಟಿ ರೂಪಾಯಿ ಸಾಲ ನೀಡಿದ್ದು, ಠೇವಣಿದಾರರು ತೊಂದರೆಗೆ ಸಿಲುಕಿದ್ದಾರೆ ಎಂದು ಆರೋಪಿಸಲಾಗಿದೆ. ಹಾಗೆಯೇ ಬ್ಯಾಂಕ್ ಪದಾಧಿಕಾರಿಗಳೇ ಅಕ್ರಮದಲ್ಲಿ ಶಾಮೀಲಾಗಿದ್ದು, ಸೂಕ್ತ ತನಿಖೆ ನಡೆಸಲು ಡಿಐಜಿ ನೇತೃತ್ವದಲ್ಲಿ ತನಿಖಾ ತಂಡ ರಚಿಸಬೇಕು ಎಂದು ಮನವಿ ಮಾಡಿದ್ದಾರೆ.