ಬೆಂಗಳೂರು: ಕಾರ್ಮಿಕರ ಕೆಲಸದ ಅವಧಿಯನ್ನು ಹೆಚ್ಚಿಸಿರುವ ಸರ್ಕಾರದ ಕ್ರಮವನ್ನು ಪ್ರಶ್ನಿಸಿ, ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ. ಇದರ ವಿಚಾರಣೆ ನಡೆಸಿದ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಬೆಂಗಳೂರಿನ ದೀಪಾಂಜಲಿ ನಗರದ ನಿವಾಸಿ ಹೆಚ್.ಮಾರುತಿ ಎಂಬುವವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು, ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಕೆಲಕಾಲ ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ಪೀಠ, ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿತು.
ಅಲ್ಲದೆ ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಾಗ ಕಾರ್ಮಿಕರ ಕೆಲಸದ ಅವಧಿ ಹೆಚ್ಚಿಸಲು, ಸಾರ್ವಜನಿಕ ತುರ್ತು ಏನಿತ್ತು. ಹೆಚ್ಚುವರಿ ಕೆಲಸದ ಅವಧಿಗೆ ಹೆಚ್ಚುವರಿ ವೇತನ ನೀಡಲಾಗುತ್ತದೆಯೇ ಹಾಗೂ ಕಾರ್ಖಾನೆಗಳಲ್ಲಿ ಕೊರೊನಾ ತಡೆಗಟ್ಟಲು ಕೈಗೊಂಡಿರುವ ಸುರಕ್ಷತಾ ಕ್ರಮಗಳೇನು ಎಂಬ ಕುರಿತು ವಿವರಣೆ ನೀಡಬೇಕು ಎಂದು ಸೂಚಿಸಿ ವಿಚಾರಣೆಯನ್ನು ಜೂನ್ 5 ಕ್ಕೆ ಮುಂದೂಡಿತು.
ಪಿಐಎಲ್ ಸಾರಾಂಶ :
ರಾಜ್ಯ ಸರ್ಕಾರ ಮೇ 22 ರಂದು ಅಧಿಸೂಚನೆ ಹೊರಡಿಸಿ, ಕಾರ್ಖಾನೆಗಳ ಕಾಯ್ದೆ 1984 ರ ಸೆಕ್ಷನ್ 51 ಮತ್ತು 54 ರಿಂದ ರಾಜ್ಯದ ಎಲ್ಲಾ ಕಾರ್ಖಾನೆಗಳಿಗೆ ವಿನಾಯಿತಿ ನೀಡಿದೆ. ಇದರ ಪರಿಣಾಮವಾಗಿ ಕಾರ್ಮಿಕರ ಕೆಲಸದ ಅವಧಿ 8 ಗಂಟೆಗಳ ಬದಲಿಗೆ, 10 ತಾಸು ಹಾಗೂ ವಾರದ ಕೆಲಸದ ಅವಧಿ 48 ಗಂಟೆಗಳ ಬದಲಿಗೆ 60 ತಾಸುಗಳಿಗೆ ಹೆಚ್ಚಾಗಿದೆ. ಸರ್ಕಾರದ ಈ ಕ್ರಮ ಸಂವಿಧಾನ ಬಾಹಿರವಾಗಿದೆ ಮತ್ತು ಕಾರ್ಮಿಕರ ಹಿತಾಸಕ್ತಿಗೆ ವಿರುದ್ಧವಾಗಿದ್ದು, ಅಧಿಸೂಚನೆಯನ್ನು ರದ್ದುಗೊಳಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.