ಬೆಂಗಳೂರು : ಬೆಂಗಳೂರು ನಗರ ಹಾಗೂ ಸುತ್ತಲಿನ ಪ್ರದೇಶಗಳ ನಡುವೆ ಸಂಪರ್ಕ ಕಲ್ಪಿಸಲು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ (ಕೆಆರ್‌ಡಿಸಿಎಲ್) ಕೈಗೊಂಡಿರುವ ‘ಹೊಸ ರಾಜ್ಯ ಹೆದ್ದಾರಿ ಯೋಜನೆ’ (ಬೆಂಗಳೂರು ಸರೌಂಡಿಂಗ್ ರೋಡ್) ಪ್ರಶ್ನಿಸಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಂಬಂಧ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಈ ಕುರಿತು ಜಯನಗರ ನಿವಾಸಿ ರಜನಿ ಸಂತೋಷ್ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ನೋಟಿಸ್ ಜಾರಿಗೆ ಆದೇಶಿಸಿದೆ. ಪ್ರತಿವಾದಿಗಳಾದ ಕೆಆರ್‌ಡಿಸಿಎಲ್, ಸರ್ಕಾರದ ಮುಖ್ಯ ಕಾರ್ಯದರ್ಶಿ, ರಾಜ್ಯ ಅರಣ್ಯ ಇಲಾಖೆ, ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯಕ್ಕೆ ನೋಟಿಸ್ ಜಾರಿ ಮಾಡಿದ್ದು, ವಿಚಾರಣೆಯನ್ನು ಫೆ.24ಕ್ಕೆ ಮುಂದೂಡಿದೆ.
ಅರ್ಜಿದಾರರ ಕೋರಿಕೆ ಏನು?
ಬೆಂಗಳೂರು ಸುತ್ತಲಿನ ಪ್ರದೇಶಗಳ ನಡುವೆ ಸಂಪರ್ಕ ಕಲ್ಪಿಸಲು ಹತ್ತು ಪ್ಯಾಕೇಜ್‌ಗಳಲ್ಲಿ ಒಟ್ಟು 1,555.21 ಕಿ.ಮೀ ಉದ್ದದ ರಸ್ತೆ ನಿರ್ಮಾಣ ಮಾಡಲು ‘ಹೊಸ ರಾಜ್ಯ ಹೆದ್ದಾರಿ ಯೋಜನೆ’ ಕೈಗೊಳ್ಳಲಾಗಿದೆ. ಯೋಜನೆಗೆ 2017ರ ಸೆ.18ರಂದು ಸರ್ಕಾರ ಅನುಮೋದನೆ ನೀಡಿದ್ದು, 2019ರ ಮೇ 2ರಂದು ಭೂ ಸ್ವಾಧೀನಕ್ಕಾಗಿ ಗೆಜೆಟ್ ನೋಟಿಫಿಕೇಷನ್ ಹೊರಡಿಸಿದೆ.
ಈಗಾಗಲೇ ಕಾಮಗಾರಿ ಆರಂಭಿಸಲಾಗಿದ್ದು, ಅಂದಾಜು 2095 ಕೋಟಿ ರೂಪಾಯಿ ವೆಚ್ಚ ತಗುಲಲಿದೆ. ಆದರೆ, ಯೋಜನೆ ಜಾರಿಗೆ ಪರಿಸರ ಪರಿಣಾಮ ಅಧ್ಯಯನ ನಡೆಸಿಲ್ಲ. ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯದಿಂದ ಪೂರ್ವಾನುಮತಿ ಮತ್ತು ನಿರಾಕ್ಷೇಪಣಾ ಪತ್ರ ಪಡೆದಿಲ್ಲ. ಯೋಜನೆ ಜಾರಿಯಿಂದ ನಗರದಲ್ಲಿ ಅಂದಾಜು 8,561 ಮರಗಳು ನೆಲಕ್ಕುರಳಲಿವೆ ಹಾಗೂ 14 ಕೆರೆಗಳಿಗೆ ಹಾನಿಯಾಗಲಿದೆ. ರಸ್ತೆಯೊಂದು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಪರಿಸರ ಸೂಕ್ಷ್ಮವಲಯದ ಮೂಲಕವೇ ಹಾದು ಹೋಗಲಿದೆ. ಇದರಿಂದ ಉದ್ಯಾನ ಮತ್ತು ಸೂಕ್ಷ್ಮ ವಲಯದ ಜೀವ ವೈವಿಧ್ಯತೆ, ಪರಿಸರ ಮತ್ತು ವನ್ಯಜೀವಿ ಸಂಕುಲದ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಅರ್ಜಿದಾರರು ದೂರಿದ್ದಾರೆ.
ಆದ್ದರಿಂದ, ಕಾಮಗಾರಿಯನ್ನು ಕೂಡಲೇ ನಿಲ್ಲಿಸಲು ಕೆಆರ್‌ಡಿಸಿಎಲ್‌ಗೆ ನಿರ್ದೇಶಿಸಬೇಕು. ನಿಯಮ ಉಲ್ಲಂಘಿಸಿ ಕಾಮಗಾರಿ ಕೈಗೊಂಡಿರುವ ಕಾರಣ ಕೆಆರ್‌ಡಿಸಿಎಲ್ ವಿರುದ್ಧ ಕ್ರಮ ಜರುಗಿಸುವಂತೆ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯಕ್ಕೆ ಸೂಚಿಸಬೇಕು. ಹೊಸದಾಗಿ ಅಧ್ಯಯನ ನಡೆಸಿ, ಯೋಜನೆಗೆ ಪರ್ಯಾಯ ಮಾರ್ಗ ಕಂಡುಕೊಳ್ಳಲು ಕೆಆರ್‌ಡಿಸಿಎಲ್‌ಗೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.