ಬೆಂಗಳೂರು: ರಾಜ್ಯದ ಹಾಲಿ ಶಾಸಕರು, ಸಂಸದರು, ಸಚಿವರ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣಗಳನ್ನು ವಿಚಾರಣೆಯಿಂದ ಕೈಬಿಟ್ಟು ರಾಜ್ಯ ಸರ್ಕಾರ ಹೊರಡಿಸಿರುವ ಆದೇಶವು, ಈಗಾಗಲೇ ನ್ಯಾಯಾಲಯಗಳಲ್ಲಿ ವಿಚಾರಣೆ ಹಂತದಲ್ಲಿರುವ ಪ್ರಕರಣಗಳಿಗೆ ಅನ್ವಯವಾಗುವುದಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಹಾಲಿ-ಮಾಜಿ ಸಂಸದರು ಹಾಗೂ ಶಾಸಕರ ವಿರುದ್ಧದ ಕ್ರಿಮಿನಲ್ ಪ್ರಕರಣಗಳನ್ನು ಕೈ ಬಿಡುವ ಮುನ್ನ ಆಯಾ ಹೈಕೋರ್ಟ್ ಅನುಮತಿ ಪಡೆಯುವುದು ಕಡ್ಡಾಯ ಎಂಬುವುದಾಗಿ ಸುಪ್ರೀಂಕೊರ್ಟ್ ನೀಡಿರುವ ತೀರ್ಪಿಗೆ ರಾಜ್ಯ ಸರ್ಕಾರ ಬದ್ಧವಾಗಿರಬೇಕಾಗುತ್ತದೆ ಎಂದು ಹೈಕೋರ್ಟ್ ಬುಧವಾರ ಸ್ಪಷ್ಟಪಡಿಸಿದೆ.
ರಾಜ್ಯ ಸರ್ಕಾರ ಜನ ಪ್ರತಿನಿಧಿಗಳ ವಿರುದ್ಧದ ಕ್ರಿಮಿನಲ್ ಪ್ರಕರಣಗಳನ್ನು ವಿಚಾರಣೆಯಿಂದ ಹಿಂದಕ್ಕೆ ಪಡೆದು 2020ರ ಆ.31ರಂದು ಹೊರಡಿಸಿರುವ ಆದೇಶದ ಬಗ್ಗೆ ಹೈಕೋರ್ಟ್ ಈ ರೀತಿ ಹೇಳಿದೆ.
ರಾಜ್ಯದ ವಿವಿಧ ನ್ಯಾಯಾಲಗಳಲ್ಲಿ ವಿಚಾರಣಾ ಹಂತದಲ್ಲಿರುವ ಜನಪ್ರತಿನಿಧಿಗಳ ವಿರುದ್ಧ 63 ಕ್ರಿಮಿನಲ್ ಪ್ರಕರಣಗಳನ್ನು ವಾಪಾಸ್ ಪಡೆದು ಸರ್ಕಾರ ಆದೇಶ ಹೊರಡಿಸಿರುವ ಕ್ರಮವನ್ನು ಪ್ರಶ್ನಿಸಿ ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ (ಪಿಯುಸಿಎಲ್) ಮತ್ತು ಜನಪ್ರತಿನಿಧಿಗಳು ಮತ್ತವರ ಬೆಂಬಲಿಗರ ವಿರುದ್ಧದ 570 ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆದು 2012 ರಿಂದ ಸರ್ಕಾರ ಹೊರಡಿಸಿರುವ ವಿವಿಧ ಆದೇಶಗಳನ್ನು ಪ್ರಶ್ನಿಸಿ ನಗರದ ವಕೀಲೆ ಸುಧಾ ಕಾಟ್ವ ಹೈಕೋರ್ಟ್‌ಗೆ ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಗಳ ವಿಚಾರಣೆ ಬುಧವಾರ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠದ ಮುಂದೆ ನಡೆಯಿತು. ಈ ಸಂದರ್ಭದಲ್ಲಿ ಪಿಯುಸಿಎಲ್ ಪರ ವಕೀಲ ಕ್ಲಿಫ್ಟನ್ ರೋಜಾರಿಯಾ ಹಾಜರಾಗಿ, ಹಾಲಿ-ಮಾಜಿ ಶಾಸಕರು ಹಾಗೂ ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳನ್ನು ಆಯಾ ರಾಜ್ಯಗಳ ಹೈಕೋರ್ಟ್ ಅನುಮತಿ ಇಲ್ಲದೆ ಹಿಂಪಡೆಯುವಂತಿಲ್ಲ ಎಂದು ಎಲ್ಲಾ ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೊರ್ಟ್ 2021ರ ಆ.10ರಂದು ಸೂಚಿಸಿದೆ. ಈ ತೀರ್ಪಿಗೆ ಕರ್ನಾಟಕ ಸರ್ಕಾರವೂ ಬದ್ಧವಾಗಿರಬೇಕಾಗುತ್ತದೆ ಎಂದು ತಿಳಿಸಿದರು.
ಅರ್ಜಿದಾರರ ಈ ವಾದ ಪರಿಗಣಿಸಿದ ನ್ಯಾಯಾಲಯ, ಮಾಜಿ-ಹಾಲಿ ಶಾಸಕರು ಹಾಗೂ ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳನ್ನು ವಿಚಾರಣೆಯಿಂದ ಕೈಬಿಡುವ ವಿಷಯದಲ್ಲಿ ಸುಪ್ರೀಂ ಕೋರ್ಟ್ ತೀರ್ಪನ್ನು ರಾಜ್ಯ ಸರ್ಕಾರ ಪಾಲಿಸಬೇಕಾಗುತ್ತದೆ. ಈ ಹಿನ್ನೆಲೆ ಕ್ರಿಮಿನಲ್ ಪ್ರಕರಣಗಳನ್ನು ಹಿಂದಕ್ಕೆ ಪಡೆದು 2020ರ ಆ.13ರಂದು ಸರ್ಕಾರ ಹೊರಡಿಸಿರುವ ಆದೇಶವು ಹಾಲಿ-ಮಾಜಿ ಶಾಸಕರು ಮತ್ತು ಸಂಸದರ ವಿಚಾರಣಾ ಹಂತದಲ್ಲಿರುವ ಪ್ರಕರಣಗಳಿಗೆ ಅನ್ವಯವಾಗುವುದಿಲ್ಲ ಎಂದು ಅಭಿಪ್ರಾಯಪಟ್ಟು ಪಿಯುಸಿಎಲ್ ಅರ್ಜಿಯನ್ನು ಇತ್ಯರ್ಥಪಡಿಸಿತು.
ನ್ಯಾಯವಾದಿ ಸುಧಾ ಕಾಟ್ವ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ರಾಜ್ಯ ಸರ್ಕಾರ ವಿಚಾರಣೆಯಿಂದ ಹಿಂದಕ್ಕೆ ಪಡೆದಿರುವ ಪ್ರಕರಣಗಳು ಎಷ್ಟು ಜನ ಪ್ರತಿನಿಧಿಗಳಿಗೆ ಸಂಬಂಧಿಸಿವೆ ಎಂದು ಮಾಹಿತಿ ಕೇಳಿತು. ಅರ್ಜಿದಾರರ ಪರ ವಕೀಲ ಎಸ್.ಉಮಾಪತಿ ಇದಕ್ಕೆ ಉತ್ತರಿಸಿ, ಈ ಬಗ್ಗೆ ಖಚಿತ ವಿವರಗಳು ಇಲ್ಲ. ಜನ ಪ್ರತಿನಿಧಿಗಳು ಮತ್ತವರ ಬೆಂಬಲಿಗರ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆದು ಬೇರೆ ಬೇರೆ ವರ್ಷಗಳಲ್ಲಿ ಸರ್ಕಾರ ಆದೇಶ ಹೊರಡಿಸಿದೆ ಎಂದು ಹೇಳಿದರು.
2020ರ ಸೆ.16 ನಂತರ ಹಾಲಿ-ಮಾಜಿ ಶಾಸಕರು ಹಾಗೂ ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆದು ಹೊರಡಿಸಲಾಗಿರುವ ಆದೇಶ ಮತ್ತು ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿ ವಿಚಾರಣೆ ಮುಂದೂಡಿದೆ.