ಬೆಂಗಳೂರು: ಅಕ್ರಮ ಸಕ್ರಮ ವಿಚಾರವಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಕಾಯ್ದೆಗೆ ತಿದ್ದುಪಡಿ ತಂದಿರುವ ಕ್ರಮ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಸರ್ಕಾರಕ್ಕೆ ಸೂಚಿಸಿರುವ ಹೈಕೋರ್ಟ್, ವಿಚಾರಣೆಯನ್ನು ಜುಲೈ 13ಕ್ಕೆ ಮುಂದೂಡಿದೆ.
ಬಿಡಿಎ ಕಾಯ್ದೆಗೆ ತಿದ್ದುಪಡಿ ತಂದಿರುವ ಕ್ರಮ ಪ್ರಶ್ನಿಸಿ ನಗರದ ವಕೀಲರಾದ ಕೆ.ಬಿ ವಿಜಯ್ ಕುಮಾರ್ ಹಾಗೂ ವಿಜಯನ್ ಮೆನನ್ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ(PIL)ಗಳನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಕೆಲ ಕಾಲ ಅರ್ಜಿಗಳ ವಿಚಾರಣೆ ನಡೆಸಿದ ಪೀಠ, ಜುಲೈ 2ರೊಳಗೆ ಆಕ್ಷೇಪಣೆ ಸಲ್ಲಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿ, ವಿಚಾರಣೆಯನ್ನು ಜುಲೈ 13ಕ್ಕೆ ಮುಂದೂಡಿತು. ಇದೇ ವೇಳೆ, ಕಾಯ್ದೆ ತಿದ್ದುಪಡಿ ಮೇರೆಗೆ ಕೈಗೊಳ್ಳುವ ಯಾವುದೇ ಕ್ರಮಗಳು ಈ ಎರಡೂ ಅರ್ಜಿಗಳ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತವೆ ಎಂದು ಸ್ಪಷ್ಟಪಡಿಸಿತು.
ಇದನ್ನೂ ಓದಿ: ಕುಶಾಲನಗರದ ತಾವರೆಕೆರೆ ಒತ್ತುವರಿ: ಡಿಸಿ ವಿರುದ್ಧ ಹೈಕೋರ್ಟ್ ಗರಂ
ಅರ್ಜಿದಾರರು, ಅಕ್ರಮ ಸಕ್ರಮ ಯೋಜನೆ ಜಾರಿಗೊಳಿಸಲು ಸರ್ಕಾರ ಬಿಡಿಎ ಕಾಯ್ದೆಗೆ ತಿದ್ದುಪಡಿ ತಂದಿರುವ ಕ್ರಮ ಸರಿಯಲ್ಲ. ಇದೇ ಅಕ್ರಮ ಸಕ್ರಮ ಯೋಜನೆ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ಸುಪ್ರೀಂಕೋರ್ಟ್ ಮುಂದೆ ವಿಚಾರಣೆಗೆ ಬಾಕಿ ಇದೆ. ಹೀಗಾಗಿ ಕಾಯ್ದೆಗೆ ತಿದ್ದುಪಡಿ ತಂದಿರುವ ಕ್ರಮವನ್ನು ಅನೂರ್ಜಿತಗೊಳಿಸಬೇಕು ಎಂದು ಕೋರಿದ್ದಾರೆ.