ಬೆಂಗಳೂರು : ಕ್ರಿಮಿನಲ್ ಪ್ರಕರಣ ಎದುರಿಸುತ್ತಿರುವ ವ್ಯಕ್ತಿಯೊಬ್ಬರಿಂದ ಹೈಕೋರ್ಟ್‌ನಲ್ಲಿ ಮತಾಂತರ ನಿಷೇಧ ತಡೆ ಕಾಯಿದೆಯನ್ನು ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕಡಬಾ ತಾಲೂಕಿನ ಹಲ್ಲಂಗೇರಿಯ ವಿಕ್ಟರ್‌ಮಾರ್ಟಿಸ್ ಎಂಬುವರು ಸಲ್ಲಿಸಿದ್ದ ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಲೆ ಅವರಿದ್ದ ವಿಭಾಗೀಯಪೀಠ, ಆರೋಪಕ್ಕೆ ಸಂಬಂಧಿಸಿದಂತೆ ವಿವರಣೆ ಕೇಳಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ರಾಜ್ಯದಲ್ಲಿ ಮತಾಂತರ ನಿಷೇಧಿಸಲು ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ರಕ್ಷಣಾ ಕಾಯಿದೆ 2022 ಅನ್ನು ಜಾರಿಗೊಳಿಸಲಾಗಿದೆ. ಇದು ಸಂವಿಧಾನ ವಿರೋಯಾಗಿದ್ದು, ಅನ್ಯ ಧರ್ಮವನ್ನು ಗುರಿಯಾಗಿಟ್ಟುಕೊಂಡೇ ಈ ಕಾಯಿದೆಯನ್ನು ರೂಪಿಸಲಾಗಿದೆ. ಇದರಿಂದ ಹಲವು ಧರ್ಮದವರಿಗೆ ತೊಂದರೆ ಆಗಲಿದೆ. ಹಾಗಾಗಿ ಕಾನೂನು ಬಾಹಿರವಾದ ಕಾಯಿದೆ ರದ್ದುಗೊಳಿಸಬೇಕು ಎಂದು ಕೋರಿದರು.
ಇದಕ್ಕೆ ಪ್ರತಿಯಾಗಿ ಅಡ್ವೊಕೆಟ್ ಜನರಲ್ ಪ್ರಭುಲಿಂಗ ನಾವದಗಿ, ಅರ್ಜಿ ಸಲ್ಲಿಸಿರುವ ಅರ್ಜಿದಾರರ ವಿರುದ್ಧವೇ ಧಾಮಿರ್ಕ ವಿಚಾರಕ್ಕೆ ಸಂಬಂಧಿಸಿದಂತೆ ಕ್ರಿಮಿನಲ್ ಪ್ರಕರಣಗಳಿವೆ. ಅಂತಹ ವ್ಯಕ್ತಿಯ ಅರ್ಜಿಯನ್ನು ನ್ಯಾಯಾಲಯ ಯಾವುದೇ ಕಾರಣಕ್ಕೂ ಪುರಸ್ಕರಿಸಬಾರದು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.
ನ್ಯಾಯಪೀಠ, ಅರ್ಜಿದಾರರ ವಿರುದ್ಧವೇ ಎರಡು ಕ್ರಿಮಿನಲ್ ಕೇಸ್‌ಗಳಿವೆ. ಹಾಗಾಗಿ ಅಂತಹ ವ್ಯಕ್ತಿ ಸಲ್ಲಿಸಿರುವ ಅರ್ಜಿಯನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನಾಗಿ ಪರಿಗಣಿಸುವುದು ಹೇಗೆ ಎಂದು ಪ್ರಶ್ನಿಸಿತು. ಅದಕ್ಕೆ ಅರ್ಜಿದಾರರ ಪರ ವಕೀಲರು, ಆ ಕ್ರಿಮಿನಲ್ ಪ್ರಕರಣಗಳನ್ನು ಕೋರ್ಟ್‌ನಲ್ಲಿ ಪ್ರಶ್ನಿಸಲಾಗುವುದು ಎಂದರು.
ಬಳಿಕ ನ್ಯಾಯಪೀಠ, ಆ ಕ್ರಿಮಿನಲ್ ಕೇಸುಗಳನ್ನು ಪ್ರಶ್ನಿಸುವುದು, ಬಿಡುವುದು ನಿಮಗೆ ಬಿಟ್ಟ ವಿಚಾರ. ಆದರೆ, ಅಂತಹ ವ್ಯಕ್ತಿ ಸಲ್ಲಿಸಿರುವ ಅರ್ಜಿಯನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನಾಗಿ ಪರಿಗಣಿಸಲಾಗದು. ಹಾಗಾಗಿ ಒಂದು ವಾರದಲ್ಲಿ ಅರ್ಜಿದಾರರು ಪ್ರತಿಕ್ರಿಯಿಸಬೇಕೆಂದು ಸೂಚನೆ ನೀಡಿ ವಿಚಾರಣೆಯನ್ನು ನ.28 ಕ್ಕೆ ಮುಂದೂಡಿತು.
ಇದನ್ನೂ ಓದಿ : ಓಲಾ, ಉಬರ್ ಆಟೋ ಸೇವೆ ಬಗ್ಗೆ ನ. 25ರೊಳಗೆ ನಿರ್ಧಾರ: ಹೈಕೋರ್ಟ್ಗೆ ಸರ್ಕಾರದ ಮಾಹಿತಿ