ಬೆಂಗಳೂರು: ಸದಾ ಟ್ರಾಫಿಕ್ ನಿಂದ ತುಂಬಿರುತ್ತಿದ್ದ ಕುಮಾರ ಕೃಪಾ ರಸ್ತೆ ಇಂದು ಕಲಾವಿದರ ಸಾವಿರಾರು ಚಿತ್ರಕಲೆಗಳಿಂದ ಕಂಗೊಳಿಸುತ್ತಿದೆ. ಸಿಎಂ ಸಿದ್ದರಾಮಯ್ಯ ಅವರು ಚಿತ್ರಕಲೆಗೆ ಕನ್ನಡದಲ್ಲಿ ಸಹಿ ಹಾಕುವುದರ ಮೂಲಕ ಚಿತ್ರಸಂತೆಗೆ ಅದ್ಧೂರಿ ಚಾಲನೆ ನೀಡಿದ್ದಾರೆ. ಚಿತ್ರಕಲಾ ಪರಿಷತ್ತಿಗೆ 50 ಲಕ್ಷ ರೂ. ಅನುದಾನವನ್ನು ಘೋಷಣೆ ಮಾಡುವುದರ ಜೊತೆಗೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಆರ್ಟ್ ಗ್ಯಾಲರಿ ಶುರು ಮಾಡುವುದರ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಚಿತ್ರಸಂತೆಯಲ್ಲಿ ಸಾವಿರಾರು ಚಿತ್ರಕಲೆಗಳು ಕಣ್ಮನ ಸೆಳೆಯುತ್ತಿವೆ. ನೋಡಲು ಬಂದ ಸಾವಿರಾರು ಜನ ಒಂದೆಡೆ ಆದರೆ ಇನ್ನೊಂದೆಡೆ ಸೆಲ್ಫಿ ಪ್ರಿಯರು ಚಿತ್ರಕಲೆಗಳ ಮುಂದೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದರು. ಒಟ್ಟಾರೆ ಸಂತೆ ನೋಡಲು ಬೆಂಗಳೂರು ಮಾತ್ರವಲ್ಲದೇ ದೇಶ, ವಿದೇಶದ ಜನರು ಬಂದಿರುವುದು ವಿಶೇಷವಾಗಿದೆ. ಕಲಾವಿದರು ಜಗತ್ತನ್ನು ನೂರೆಂಟು ಆಯಾಮಗಳಲ್ಲಿ ವಿಮರ್ಶಿಸುತ್ತಾರೆ. ಕೊನೆಗೆ ತಮ್ಮದೇ ಕಲ್ಪನೆಯನ್ನು ಬಣ್ಣಗಳ ಮೂಲಕ ಹಾಳೆಯಲ್ಲಿ ಬಿಡಿಸುತ್ತಾರೆ. ಇಂತಹ ಕಲಾವಿದರ ಕಲೆಗಳು ಕರ್ನಾಟಕ ಚಿತ್ರಕಲಾ ಪರಿಷತ್ 21ನೇ ಚಿತ್ರಸಂತೆಯಲ್ಲಿ ಪ್ರದರ್ಶಗೊಂಡವು.
ಈ ಬಾರಿ ಚಿತ್ರಸಂತೆಯಲ್ಲಿ 22 ರಾಜ್ಯಗಳ 1,680 ಕಲಾವಿದರು ಭಾಗಿಯಾಗಿದ್ದು, ಸಾವಿರಾರು ಚಿತ್ರಕಲೆಗಳು ಅನಾವರಣಗೊಂಡಿವೆ. ಡಾಟ್ ವರ್ಕ್, ವಾಟರ್ ಪೇಯಿಂಟ್ ವರ್ಕ್, ಟ್ರೆಡ್ ಡ್ರಾಯಿಂಗ್, ಕ್ಯಾರಿಕೇಚರ್ ಸೇರಿದಂತೆ ನೂರಾರು ಬಗೆಯ ಆರ್ಟ್ ಫಾರ್ಮ್ಗಳು ನೋಡುಗರ ಗಮನ ಸೆಳೆದವು. ವಿಕೇಂಡ್ ಆದ ಕಾರಣ ಜನರು ಸಹ ತಮ್ಮ ಫ್ಯಾಮಿಲಿ ಹಾಗೂ ಫ್ರೆಂಡ್ಸ್ ಜೊತೆ ಬಂದು ಕಲಾವಿದರ ಕುಂಚದಲ್ಲಿ ಅರಳಿದ್ದ ಕಲೆಗಳನ್ನು ಕಂಡು ಮೂಖವಿಸ್ಮಿತರಾದರು. ಜೊತೆಗೆ ಅವುಗಳನ್ನು ಖರೀದಿಸಿದರು. ಕೇವಲ ಪೇಯಿಂಟಿಂಗ್ಸ್ ಅಷ್ಟೇ ಅಲ್ಲದೇ ಡೊಳ್ಳು ಕುಣಿತ, ಪೂಜಾ ಕುಣಿತ, ಯಕ್ಷಗಾನ ವೇಷಗಳು ಜನರಿಗೆ ಮನರಂಜನೆಯನ್ನು ನೀಡುತ್ತಿವೆ.
ಒಟ್ಟಿನಲ್ಲಿ ಕಲಾವಿದರಿಗಾಗಿ ಚಿತ್ರಕಲಾ ಪರಿಷತ್ ಹಾಗೂ ರಾಜ್ಯ ಸರ್ಕಾರ ಕಲ್ಪಿಸಿರುವ ಚಿತ್ರಸಂತೆ ಎನ್ನುವ ವೇದಿಕೆಯಿಂದ ಸಾವಿರಾರು ಕಲಾವಿದರು ಪರಿಚಯವಾಗುತ್ತಿರುವುದು ನಿಜಕ್ಕೂ ಸಂತೋಷದ ಸಂಗತಿಯಾಗಿದೆ.
ಇದನ್ನೂ ಓದಿ: ಬೆಂಗಳೂರು: ಚಿತ್ರಸಂತೆಗೆ ಹರಿದು ಬಂದ ಜನಸಾಗರ, ವಾಹನ ಸಂಚಾರ ನಿರ್ಬಂಧ