ಬೆಂಗಳೂರು: ಆರೋಗ್ಯಾಧಿಕಾರಿ ಡಾ.ನಾಗೇಂದ್ರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸತ್ಯ ಸಂಗತಿ ತಿಳಿಯಲು ತನಿಖೆಗೆ ಆದೇಶ ಮಾಡಿದ್ದೇನೆ. ಸಮಗ್ರ ತನಿಖೆ ಮಾಡಿ ಸತ್ಯ ಸಂಗತಿ ತಿಳಿಯೋ ಪ್ರಯತ್ನ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಕೆಆರ್ಎಸ್ಗೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಆತ್ಮಹತ್ಯೆ ಪ್ರಕರಣವನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ 50 ಲಕ್ಷ ರೂ. ನೀಡಲಾಗುತ್ತಿದೆ. ಅವರ ಕುಟುಂಬದವರಿಗೆ ಸರ್ಕಾರಿ ನೌಕರಿ ಕೊಡಲು ಸೂಚನೆ ನೀಡಿದ್ದೇನೆ ಎಂದರು.
ಕಾಂಗ್ರೆಸ್ ನಾಯಕರಿಗೆ ಸಿಎಂ ತಿರುಗೇಟು
ಬೆಂಗಳೂರು ಗಲಭೆ ಪ್ರಕರಣ ಸಂಬಂಧ ಬಿಜೆಪಿ ತನಿಖೆಯಲ್ಲಿ ರಾಜಕೀಯ ಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕರು ಆರೋಪ ಮಾಡುತ್ತಿದ್ದಾರೆ. ಸತ್ಯ ಸಂಗತಿ ಬಂದ ಮೇಲೆ ಅವರಿಗೆ ಎಲ್ಲ ತಿಳಿಯುತ್ತಿದೆ. ತನಿಖೆ ಮೂಲಕ ಸತ್ಯ ಸಂಗತಿ ತಿಳಿಸುವ ಪ್ರಯತ್ನ ಮಾಡಲಾಗುತ್ತಿದೆ. ನಮಗೇನೂ ರಾಜಕೀಯ ಮಾಡೋ ಅವಶ್ಯಕತೆ ಇಲ್ಲ. ತನಿಖೆಯಿಂದ ಅನೇಕ ಘಟನೆಗಳು ಹೊರಗೆ ಬರುತ್ತವೆ ಎಂದರು.
ಕೆಲ ಅಪರಾಧಿಗಳು ಬೇರೆ ಬೇರೆ ರೀತಿ ವ್ಯವಹಾರ ಮಾಡುತ್ತಿರುವುದು ಬೆಳಕಿಗೆ ಬರುತ್ತಿದೆ. ಇದಕ್ಕೆ ಸಹಕಾರ ನೀಡಿದ್ದ ಅಪರಾಧಿಗಳು ಬೇರೆ ಬೇರೆ ರೂಪದಲ್ಲಿ ಹೊರ ಬರುತ್ತಿದ್ದಾರೆ. ತನಿಖೆ ಬಳಿಕ ಎಲ್ಲ ಸತ್ಯ ಹೊರ ಬರಲಿದೆ ಎಂದರು.
ಗೌರಿ ಗಣೇಶ ಹಬ್ಬಕ್ಕೆ ಶುಭಕೋರಿದ ಸಿಎಂ
ಇದೇ ವೇಳೆ, ನಾಡಿನ ಜನರಿಗೆ ಸಿಎಂ ಯಡಿಯೂರಪ್ಪ ಗೌರಿ ಗಣೇಶ ಹಬ್ಬದ ಶುಭಕೋರಿದರು. ಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡದ ಪರಿಸ್ಥಿತಿಯಲ್ಲಿ ಇದ್ದೇವೆ. ಆದಷ್ಟೂ ಮನೆಯಲ್ಲಿ ಹಬ್ಬ ಆಚರಿಸಿ. ಹೊರಗಡೆ 4 ಅಡಿಗಿಂತ ಹೆಚ್ಚು ಎತ್ತರದ ಗಣೇಶ ಮೂರ್ತಿ ಇಡಲು ಅವಕಾಶವಿಲ್ಲ. ಯಾವುದೇ ಕಾರ್ಯಕ್ರಮಗಳಿಗೆ ಅವಕಾಶ ಇಲ್ಲ. ಸರ್ಕಾರದ ಮಾರ್ಗಸೂಚಿ ಎಲ್ಲರೂ ಪಾಲಿಸಬೇಕು ಎಂದರು.
ಅಲ್ಲದೇ ಮೈಸೂರು ದಸರಾ ಆಚರಣೆ ಕುರಿತು ಚರ್ಚೆ ನಡೆಸುತ್ತಿದ್ದೇವೆ. ಈ ಬಾರಿ ಸರಳ ದಸರಾ ಆಚರಣೆ ಮಾಡುತ್ತೇವೆ. ಸರಳವಾಗಿ ಹೇಗೆ ಆಚರಣೆ ಮಾಡಬೇಕು ಅಂತ ಚರ್ಚೆ ಮಾಡಿ ನಿರ್ಧಾರ ಮಾಡುತ್ತೇವೆ ಎಂದರು.