ಬೆಂಗಳೂರು: ಶಾಲಾ - ಕಾಲೇಜಿನಲ್ಲಿ ಶೈಕ್ಷಣಿಕ ಶಿಕ್ಷಣ ಎಷ್ಟು ಮುಖ್ಯನೋ ಅಷ್ಟೇ ದೈಹಿಕ ಶಿಕ್ಷಣವೂ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಬಹು ಮುಖ್ಯ. ಮಕ್ಕಳ ಪ್ರತಿಭೆ ಹೊರ ಬರುವುದೇ ಅವ್ರ ಚಟುವಟಿಕೆಗಳಿಂದ. ಪಾಠದೊಂದಿಗೆ ಆಟವೂ ಇದ್ದರೆ ಮಕ್ಕಳ ಮನಸ್ಸು ಉತ್ಸಾಹದಿಂದ ಇರಲು ಸಾಧ್ಯವಾಗುತ್ತೆ. ಮಕ್ಕಳ ಲವಲವಿಕೆಗೆ, ಮಾನಸಿಕ ಬಲವರ್ಧನೆಗೆ ದೈಹಿಕ ಶಿಕ್ಷಣ ಅತ್ಯಗತ್ಯವಾಗಿದ್ದು, ಪಾಠದಷ್ಟೇ ಆಟವೂ ಬೇಕು. ಆದರೆ. ಕಳೆದ ಎರಡು ವರ್ಷಗಳಿಂದ ಕೋವಿಡ್ ನಿಂದಾಗಿ ದೈಹಿಕ ಶಿಕ್ಷಣ ಅನ್ನೋ ಪಾಠವೇ ಮರೆಯಾಗಿ ಹೋಗಿದೆ. ಇದರಿಂದಾಗಿ ಮಕ್ಕಳಲ್ಲಿರುವ ಈಡನ್ ಟ್ಯಾಲೆಂಟ್ ಹಾಗೇ ದೂರ ಉಳಿದಿದೆ.
ಸಾಂಕ್ರಾಮಿಕ ಅನ್ನೋ ಕಾರಣಕ್ಕೆ ಶೈಕ್ಷಣಿಕ ವರ್ಷಗಳೆಲ್ಲ ಭಾಗಶಃ ಆನ್ ಲೈನ್ ಪಾಠ ಪ್ರವಚನ ನಡೆದುಹೋಯ್ತು. ಭೌತಿಕ ತರಗತಿಗಳು ಆರಂಭವಾದರೂ ಅಲ್ಲಿ ಸಿಲಬಸ್ ಮುಗಿಸುವ ಚಿಂತೆಯಲ್ಲಿ ದೈಹಿಕ ಶಿಕ್ಷಣಕ್ಕೆ ಒತ್ತು ಕೊಡಲು ಅಸಾಧ್ಯವಾಗಿ ಹೋಯ್ತು. ಇದೀಗ 2021-22ನೇ ಸಾಲಿನ ಶೈಕ್ಷಣಿಕ ವರ್ಷವೇ ಮುಗಿಯುವ ಹಂತಕ್ಕೆ ಬಂದಿದ್ದು, ಅದೆಷ್ಟೋ ಪ್ರತಿಭೆಗಳು ಕೋವಿಡ್ ನಿಂದಾಗಿ ಕಂಡರೂ ಕಾಣದಂತಾಗಿದೆ.
ಈ ಕುರಿತು ಈಟಿವಿ ಭಾರತ ನೊಂದಿಗೆ ಮಾತಾನಾಡಿರುವ ರೂಪ್ಸಾ ಸಂಘದ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ, ಶಾಲೆಯಲ್ಲಿ ಶೈಕ್ಷಣಿಕ ಶಿಕ್ಷಣದಲ್ಲಿ ದೈಹಿಕ ಶಿಕ್ಷಣವೂ ಮಕ್ಕಳ ಕಲಿಕೆಯ ಭಾಗವಾಗಿದ್ದು, ಅದು ಬಹಳನೇ ಮುಖ್ಯ. ಸೌಂಡ್ ಬಾಡಿ ಇನ್ ಸೌಂಡ್ ಮೈಂಡ್ ಎಂಬಂತೆ ಮಕ್ಕಳು ದೇಹ ದಂಡಿಸಿದರೆ ಅವರ ಆರೋಗ್ಯವೂ ಚೆನ್ನಾಗಿ ಇರಲಿದೆ. ಕೋವಿಡ್ ಕಾರಣಕ್ಕೆ ಕಳೆದ ಎರಡು ವರ್ಷಗಳಿಂದ ಅನ್ಯಾಯವಾಗಿದೆ. ಈ ವರ್ಷ 5-6 ತಿಂಗಳು ಶಾಲೆಗಳು ನಡೆಯಿತಾದರೂ ದೈಹಿಕ ಶಿಕ್ಷಣದ ಕಡೆ ಸರ್ಕಾರ ಗಮನ ಕೊಡಬೇಕಿತ್ತು ಎಂದು ತಿಳಿಸಿದರು.
ಈ ವರ್ಷ ಶೈಕ್ಷಣಿಕ ವೇಳಾಪಟ್ಟಿಯಲ್ಲಿ ದೈಹಿಕ ಶಿಕ್ಷಣದ ಸಮಯ ಸೇರಿದ್ದರೆ ಅನುಕೂಲವಾಗುತ್ತಿತ್ತು. ಆದರೆ, ಅದರ ಪ್ರಸ್ತಾಪ ಇಲ್ಲದ ಕಾರಣಕ್ಕೆ ಕ್ಲಸ್ಟರ್ ಲೇವಲ್ ನಿಂದ ಹಿಡಿದು ತಾಲೂಕು, ಜಿಲ್ಲಾ, ರಾಜ್ಯ ಮಟ್ಟದ ಕ್ರೀಡಾ ಚಟುವಟಿಕೆಗಳೇ ಶಾಲೆಗಳಲ್ಲಿ ನಡೆದಿಲ್ಲ. ಇದರಿಂದ ಮಕ್ಕಳು ಏನೋ ಕಳೆದುಕೊಂಡಂತೆ ಇರುವುದನ್ನ ಈಗೀಗ ನಾವು ಕಾಣುತ್ತಿದ್ದೇವೆ. ಹಲವು ಪೋಷಕರು ಕೂಡ ಈ ಕುರಿತು ದೂರಿದ್ದಾರೆ. ಸದ್ಯ ಕೊರೊನಾ ದೂರವಾಗಿದ್ದು, ಮುಂದಿನ ಶೈಕ್ಷಣಿಕ ವರ್ಷದಲ್ಲಿ ಸ್ಪೋರ್ಟ್ ಚಟುವಟಿಕೆಗೆ ಗಮನ ಕೊಡುವಂತೆ ಮನವಿ ಮಾಡಿದ್ದಾರೆ.
ಮಕ್ಕಳ ಕ್ವಾಲಿಟಿ ಲೈಫ್ಗೆ ದೈಹಿಕ ಶಿಕ್ಷಣ ಬೇಕೇಬೇಕು : ಡಾ ದಿವ್ಯ ರಾಜ್ ಟಿ ಜೆ
ಫಿಸಿಕಲ್ ಆ್ಯಕ್ಟಿವಿಟಿಯಿಂದಾಗಿ ಮಕ್ಕಳ ಏಕಾಗ್ರತೆ, ಆತ್ಮವಿಶ್ವಾಸ ಹೆಚ್ಚಿಸುತ್ತೆ. ಹೀಗಾಗಿ ಮಕ್ಕಳ ಕ್ವಾಲಿಟಿ ಲೈಫ್ಗೆ ಶಾಲೆಯಲ್ಲಿ ದೈಹಿಕ ಶಿಕ್ಷಣ ಬೇಕೇಬೇಕು ಅಂತ ಸ್ಪೆಷಲಿಸ್ಟ್ ಆಸ್ಪತ್ರೆಯ ಪೀಡಿಯಾಟ್ರಿಕ್ಸ್ ಡಾ.ದಿವ್ಯ ರಾಜ್ ಟಿ ಜೆ ತಿಳಿಸಿದ್ದಾರೆ. ಈ ಟಿವಿ ಭಾರತ ದೊಂದಿಗೆ ಮಾತಾನಾಡಿರುವ ಡಾ. ದಿವ್ಯ ರಾಜ್, ದೈಹಿಕ ಶಿಕ್ಷಣ ಅನ್ನೋದು ಮಕ್ಕಳಿಗೆ ಬಹಳ ಮುಖ್ಯವಾಗಿದ್ದು, ದೈಹಿಕ ಹಾಗೂ ಮಾನಸಿಕ ಸ್ಥಿತಿಗತಿ, ಭಾವನೆಯನ್ನ ಉತ್ತಮವಾಗಿಸಲು ಇದು ಸಹಕಾರಿಯಾಗಿರಲಿದೆ.
ಶಾಲೆಯಲ್ಲಿ ಪಾಠಕ್ಕಷ್ಟೇ ಗಮನಕೊಟ್ಟರೆ ಮಕ್ಕಳಲ್ಲಿ ಅಲಸ್ಯ, ಬೇಸರದ ಭಾವ ಮೂಡುತ್ತೆ. ಹೀಗಾಗಿ ದೈಹಿಕ ಶಿಕ್ಷಣ ನೀಡುವುದು ಅನಿರ್ವಾಯವಾಗಿದ್ದು, ಇದರಿಂದ ಹಲವು ಪ್ರಯೋಜನಗಳು ಇವೆ. ಅನಾರೋಗ್ಯ ಸಮಸ್ಯೆಯಿಂದ ದೂರ ಉಳಿಸಬಹುದು, ಚುರುಕು ಬುದ್ದಿಶಕ್ತಿ, ಆತ್ಮವಿಶ್ವಾಸ ಹೆಚ್ಚಿಸಲು ದೈಹಿಕ ಶಿಕ್ಷಣ ಶಾಲಾ-ಕಾಲೇಜುಗಳಲ್ಲಿ ಅಗತ್ಯ. ಈಗಾಗಲೇ ಮಕ್ಕಳ ಗಮನವೂ ಟಿವಿ, ಮೊಬೈಲ್ ಫೋನ್ ಅಂತ ಜಾರಿಹೋಗಿದೆ.
ಈ ಮಧ್ಯೆ ಕೋವಿಡ್ ನಂತಹ ಸಾಂಕ್ರಾಮಿಕ ಕಾಯಿಲೆಯಿಂದಾಗಿ ಮಕ್ಕಳ ಶೈಕ್ಷಣಿಕಕ್ಕೆ ಮಾತ್ರವಲ್ಲದೇ, ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರಿದೆ. ಆನ್ ಲೈನ್ ಕ್ಲಾಸ್ ನಿಂದಾಗಿ ಈಗಾಗಲೇ ಒಬೆಸಿಟಿ, ವಿಟಮಿನ್ ಡಿ ಕೊರತೆ, ನಿದ್ರಾಹೀನತೆ, ಮಾನಸಿಕ ಕಿರಿಕಿರಿ ಸಮಸ್ಯೆ ಉದ್ಬವಿಸಿದೆ. ಹೀಗಾಗಿ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ದೈಹಿಕ ಶಿಕ್ಷಣ ಕಡ್ಡಾಯ ಮಾಡಬೇಕಿದೆ ಅಂದರು.