ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಎರಡನೇ ಅಲೆಯ ಕಾರಣಕ್ಕಾಗಿ ಶಾಲಾ-ಕಾಲೇಜು ಆರಂಭವಾಗುತ್ತಾ/ಇಲ್ಲವಾ ಎಂಬ ಚರ್ಚೆಗಳು ನಡೆದಿದ್ದವು. ಇವೆಲ್ಲದರ ಮಧ್ಯೆ ಶಿಕ್ಷಣ ಇಲಾಖೆ ಹಾಗೂ ಸರ್ಕಾರ ದೃಢ ನಿರ್ಧಾರ ಮಾಡಿ, ಯಶಸ್ವಿಯಾಗಿ ಎಸ್ಎಸ್ಎಲ್ಸಿ, ಡಿಗ್ರಿ ಹಾಗೂ ಟಿಇಟಿ ಪರೀಕ್ಷೆಯನ್ನೂ ಯಶಸ್ವಿಯಾಗಿ ಮುಗಿಸಿದೆ.
ಸದ್ಯ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ನಡೆಯುತ್ತಿದ್ದು, ಇದರ ನಡುವೆಯೇ ಶಾಲಾ - ಕಾಲೇಜು ಆರಂಭ ಮಾಡಿದೆ. ಇದಕ್ಕೂ ಮೊದಲು ಟ್ರಯಲ್ ರೀತಿಯಲ್ಲಿ ಪದವಿ ಕಾಲೇಜುಗಳನ್ನ ಆರಂಭಿಸಿದ್ದ ಸರ್ಕಾರ ಇದೀಗ ನಿನ್ನೆಯಿಂದ 9 ರಿಂದ 12 ನೇ ಕ್ಲಾಸ್ ವರೆಗೆ ಭೌತಿಕ ತರಗತಿ ಆರಂಭಿಸಿದೆ.
ಮೊದಲ ದಿನಕ್ಕೆ ತಕ್ಕಮಟ್ಟಿಗೆ ವಿದ್ಯಾರ್ಥಿಗಳು ಆಗಮಿಸಿದ್ದರು. ಆದರೆ, ಎರಡನೇ ದಿನಕ್ಕೆ ಆ ಸಂಖ್ಯೆ ದುಪ್ಪಟ್ಟ ಆಗಿದೆ. ಈ ಮೂಲಕ ನಿಧಾನಗತಿಯಲ್ಲಿ ಶಾಲೆಗೆ ಬರುವವರ ಸಂಖ್ಯೆ ಹೆಚ್ಚಾಗ್ತಿದೆ. ಇದರಿಂದ ಕೊರೊನಾ ಮಧ್ಯೆಯು ಶಾಲಾ - ಕಾಲೇಜು ಆರಂಭಿಸಿ ಯಶಸ್ಸು ಕಾಣುವ ದಾರಿ ಹಿಡಿದಿದೆ.
ಕೊರೊನಾ ಕಾರಣಕ್ಕೆ ವಿದ್ಯಾರ್ಥಿಗಳು ಶಾಲಾ - ಕಾಲೇಜು ಬಾಗಿಲು ತಟ್ಟುತ್ತಾರೋ/ಇಲ್ಲವೋ ಅನುಮಾನ ಇತ್ತು. ಆದರೆ, ಕಲಿಕೆ ದೃಷ್ಟಿಯಿಂದ ಇದೀಗ ಶಾಲೆ - ಕಾಲೇಜಿನತ್ತ ವಿದ್ಯಾರ್ಥಿಗಳು ಹೆಜ್ಜೆ ಹಾಕಿದ್ದಾರೆ.
ರಾಜ್ಯಾದ್ಯಂತ ಎರಡನೇ ದಿನವಾದ ಇಂದು 9ನೇ ತರಗತಿಯಲ್ಲಿ 3,58,393 (ಶೇ41.17) ವಿದ್ಯಾರ್ಥಿಗಳು, 10ನೇ ತರಗತಿಗೆ 3,82,147 (ಶೇ 43.86) ವಿದ್ಯಾರ್ಥಿಗಳು ಹಾಜರಾಗಿದ್ದಾರೆ.
ರಾಜ್ಯದಲ್ಲಿ ಶೇ. 49.79ರಷ್ಟು ಶಾಲೆಗಳು ಆರಂಭವಾಗಿದ್ದರೆ, ಶೇ.50.21 ಶಾಲೆಗಳು ಶುರುವಾಗಿಲ್ಲ. ಡೆಂಜರ್ ಜೋನ್ನಲ್ಲಿರುವ ದಕ್ಷಿಣ ಕನ್ನಡ, ಉಡುಪಿ, ಕೊಡುಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಶಾಲೆಗಳು ಆರಂಭವಾಗಿಲ್ಲ.
ದ್ವಿತೀಯ ಪಿಯು ತರಗತಿಗೆ 3 ಲಕ್ಷಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಗೈರು ಹಾಜರು:
ಇನ್ನು, ಪ್ರಥಮ ಪಿಯುಸಿ ದಾಖಲಾತಿ ಮುಂದುವರೆದಿರುವುದರಿಂದ ಆ ವಿದ್ಯಾರ್ಥಿಗಳಿಗೆಲ್ಲ ಆನ್ಲೈನ್ ತರಗತಿ ಮಾತ್ರ ನಡೆಯುತ್ತಿದೆ. ಸದ್ಯ ಎಲ್ಲೂ ಭೌತಿಕ ತರಗತಿ ಶುರುವಾಗಿಲ್ಲ. ಇನ್ನು ಎರಡನೇ ದಿನ ದ್ವಿತೀಯ ಪಿಯುಸಿಗೆ ರಾಜ್ಯಾದ್ಯಂತ ಶೇ.37.54 ರಷ್ಟು ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ರಾಜ್ಯದಲ್ಲಿ 6,06,154 ವಿದ್ಯಾರ್ಥಿಗಳಲ್ಲಿ ಆನ್ಲೈನ್ ಕ್ಲಾಸ್ಗೆ 60,424 ಹಾಗೂ ಆಫ್ಲೈನ್ ಕ್ಲಾಸ್ (ಭೌತಿಕ ತರಗತಿ) 1,67,129 ಒಟ್ಟಾರೆ 2,27,553 ವಿದ್ಯಾರ್ಥಿಗಳು ಹಾಜರಾಗಿದ್ದರೆ. 3,78,601 ಗೈರು ಹಾಜರಾಗಿದ್ದಾರೆ.
ಓದಿ: ಇಲಾಖೆಗಳ ಅಗತ್ಯದ ಕನಿಷ್ಠ ಶೇ.25 ರಷ್ಟು ವಸ್ತ್ರ ಕೈಮಗ್ಗ ನಿಗಮದಿಂದ ಖರೀದಿ: ಸಿಎಂ ಸೂಚನೆ