ಬೆಂಗಳೂರು: ರಾಜ್ಯದಲ್ಲಿ ಸಂಚಲನ ಸೃಷ್ಟಿಸಿರುವ ಫೋನ್ ಕದ್ದಾಲಿಕೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಕಮಿಷನರ್ ಕಚೇರಿಯ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಸಿಸಿಬಿ ಡಿಸಿಪಿ ಕುಲದೀಪ್ ಕುಮಾರ್ ಜೈನ್, ಫೋನ್ ಕದ್ದಾಲಿಕೆ ಆನ್ಲೈನ್ ಮೂಲಕ ಮಾಡಲಾಗಿದೆ ಎಂದು ದೂರು ದಾಖಲಿಸಿದ್ದರು. ಹೀಗಾಗಿ ಸೈಬರ್ ಪೊಲೀಸರು ಐಟಿ ಆಕ್ಟ್ 2000 u/s(72), ಟೆಲಿಗ್ರಾಫ್ ಆಕ್ಟ್ 1885 u/s(26) ಅಡಿಯಲ್ಲಿ ಎಫ್ಐಆರ್ ದಾಖಲು ಮಾಡಿದ್ದಾರೆ. ಆದರೆ ಎಫ್ಐಆರ್ ಕಾಪಿಯಲ್ಲಿ ಕೃತ್ಯ ಎಸಗಿದವರ ಮಾಹಿತಿ ಮತ್ತು ವಿವರ ದಾಖಲಿಸಿಲ್ಲ.
ಈ ಪ್ರಕರಣಲ್ಲಿ ಐಟಿ ಆ್ಯಕ್ಟ್ ಏನು ಹೇಳುತ್ತದೆ? ಐಟಿ ಆಕ್ಟ್ 72ರ ಪ್ರಕಾರ ಯಾವುದೇ ಒಂದು ಸಾರಾಂಶ, ಡಾಟಾ ತುಂಬಾ ಗುಪ್ತವಾಗಿ ಶೇಖರಿಸಿಟ್ಟಿದ್ದಾಗ ಅದನ್ನು ಸಂಬಂಧಿಸಿದ ವ್ಯಕ್ತಿಯ ಒಪ್ಪಿಗೆ ಇಲ್ಲದೇ ತೆಗೆಯುವುದು, ಕದಿಯುವುದು ಅಪರಾಧವಾಗುತ್ತದೆ. ಇದಕ್ಕೆ ಕನಿಷ್ಠ ಮೂರು ವರ್ಷಗಳ ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶ ಇದೆ.
ಹಾಗೆಯೇ ಇಂಡಿಯನ್ ಟೆಲಿಗ್ರಾಫ್ ಆಕ್ಟ್ 26 ಪ್ರಕಾರ ಯಾವುದೇ ಟೆಲಿಗ್ರಾಫಿಕ್ ಸಿಗ್ನಲ್ ಅನ್ನು ಅಧಿಕಾರ ಇಲ್ಲದ ವ್ಯಕ್ತಿಗಳು ಬಳಸಿಕೊಳ್ಳುವುದು ಅಥವಾ ಅದರ ದುರ್ಬಳಕೆ ಅಪರಾಧವಾಗಿದೆ. ಇದನ್ನು ದುರ್ಬಳಕೆ ಮಾಡಿಕೊಂಡಲ್ಲಿ ಮೂರು ವರ್ಷಗಳ ಕಾಲ ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶ ಇದೆ.