ಬೆಂಗಳೂರು: ಆರ್.ಆರ್ ನಗರ ಹಾಗೂ ಶಿರಾದಲ್ಲಿ ಉಪಚುನಾವಣೆ ಪ್ರಚಾರದಲ್ಲಿ ತೊಡಗಿರುವ ವಿವಿಧ ಪಕ್ಷಗಳ ನಾಯಕರು, ಅಭ್ಯರ್ಥಿಗಳು, ಪ್ರಚಾರಕರು ಕೊರೊನಾ ಮಾರ್ಗಸೂಚಿಗಳನ್ನು ಗಾಳಿಗೆ ತೂರುತ್ತಿದ್ದು, ಇದು ಮುಂದಿನ ದಿನಗಳಲ್ಲಿ ಸರ್ಕಾರವನ್ನು ಸಂಕಷ್ಟಕ್ಕೆ ಸಿಲುಕಿಸುವ ಸಾಧ್ಯತೆಯಿದೆ.
ಕೊರೊನಾ ಸೋಂಕು ನಿಯಂತ್ರಿಸಲು ಕೇಂದ್ರ ಸರ್ಕಾರ ರೂಪಿಸಿರುವ ಮಾರ್ಗಸೂಚಿಗಳನ್ನು ರಾಜ್ಯದಲ್ಲಿ ಜಾರಿಗೊಳಿಸಲು ಅಧಿಕಾರಿಗಳು ಶ್ರಮಿಸುತ್ತಿದ್ದಾರೆ. ಇದಕ್ಕೆ ಸಹಕಾರ ನೀಡಬೇಕಿದ್ದ ರಾಜಕೀಯ ನಾಯಕರು, ಜನ ಪ್ರತಿನಿಧಿಗಳೇ ಚುನಾವಣೆ ಪ್ರಚಾರ ನೆಪದಲ್ಲಿ ನಿಯಮಗಳನ್ನು ಗಾಳಿಗೆ ತೂರುತ್ತಿದ್ದಾರೆ. ಇದು ಅಧಿಕಾರಿಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಹೈಕೋರ್ಟ್ ನಿರ್ದೇಶನಗಳ ಉಲ್ಲಂಘನೆ : ರಾಜ್ಯ ಸರ್ಕಾರ ಕೊರೊನಾ ಮಾರ್ಗಸೂಚಿಗಳನ್ನು ಜಾರಿಗೊಳಿಸುವಲ್ಲಿ ವಿಫಲವಾಗುತ್ತಿದೆ. ಈ ನಿಟ್ಟಿನಲ್ಲಿ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡುವಂತೆ ಕೋರಿ ಲೆಜ್ಸ್ ಕಿಟ್ ಫೌಂಡೇಶನ್ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಅರ್ಜಿ ವಿಚಾರಣೆಗೆ ನಡೆಸಿದ ಹೈಕೋರ್ಟ್, ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿತ್ತು. ಅಲ್ಲದೇ, ಛೀಮಾರಿಯನ್ನೂ ಹಾಕಿತ್ತು. ಇದರಿಂದ ಕೋರ್ಟ್ ಮುಂದೆ ತನ್ನ ನಿಲುವನ್ನು ಸಮರ್ಥಿಸಿಕೊಳ್ಳಲು ಸರ್ಕಾರ ಹೆಣಗಾಡುತ್ತಿದೆ.
ಕೊರೊನಾ ಸೋಂಕು ನಿಯಂತ್ರಿಸಲು ರೂಪಿಸಿರುವ ಮಾರ್ಗಸೂಚಿಗಳನ್ನು ಉಲ್ಲಂಘನೆ ಮಾಡುತ್ತಿರುವ ಪ್ರಕರಣಗಳಲ್ಲಿ ಸರ್ಕಾರ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ. ಕನಿಷ್ಠ ಪಕ್ಷ ಮಾಸ್ಕ್ ಧರಿಸುವ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡಿಲ್ಲ. ಇದರಿಂದಾಗಿಯೇ ಜನರು ಮಾರ್ಗಸೂಚಿಗಳನ್ನು ಪಾಲಿಸುತ್ತಿಲ್ಲ. ರಾಜಕೀಯ ನಾಯಕರು ಹಾಗೂ ಪ್ರಭಾವಿಗಳು ನಿರಂತರವಾಗಿ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ. ಈ ಸಂಬಂಧ ಯಾವೆಲ್ಲ ಕ್ರಮ ಕೈಗೊಂಡಿದ್ದೀರಿ ಎಂಬುದರ ವಿವರವನ್ನೂ ಸರಿಯಾಗಿ ನೀಡುತ್ತಿಲ್ಲ ಎಂದು ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ಗಣ್ಯರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ನಿರ್ದೇಶನ :
ಜನಪ್ರತಿನಿಧಿಗಳು, ಸಚಿವರು, ಚಿತ್ರ ನಟರು ಹಾಗೂ ಪ್ರಭಾವಿಗಳು ನಿಯಮ ಉಲ್ಲಂಘಿಸಿದ ಕುರಿತು ಸಾಮಾಜಿಕ ಕಾರ್ಯಕರ್ತರು ಸಲ್ಲಿಸಿರುವ ಮಧ್ಯಂತರ ಅರ್ಜಿಗಳ ವಿಚಾರಣೆ ವೇಳೆ, ನಿಯಮ ಉಲ್ಲಂಘಿಸುವ ಯಾವುದೇ ಪ್ರಭಾವಿಯ ವಿರುದ್ಧವೂ ನಿರ್ದಾಕ್ಷಿಣ್ಯ ಕ್ರಮ ಜರುಗಿಸುವಂತೆ ಹೈಕೋರ್ಟ್ ಸರ್ಕಾರಕ್ಕೆ ನಿರ್ದೇಶಿಸಿದೆ. ಚಾಮುಂಡಿ ಬೆಟ್ಟಕ್ಕೆ ಗಣ್ಯರಿಗೆ ಅವಕಾಶ ನೀಡಿದ ಪ್ರಕರಣ, ಕೆಂಪೇಗೌಡ ಏರ್ಪೋರ್ಟ್ನಲ್ಲಿ ಖುದ್ದು ಸಿಎಂ ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ನಿಯಮಗಳನ್ನು ಉಲ್ಲಂಘಿಸಿದ ಕುರಿತು ಸರ್ಕಾರ ನೀಡಿದ್ದ ವರದಿಯನ್ನು ಒಪ್ಪದ ಹೈಕೋರ್ಟ್, ಕೈಗೊಂಡ ಕ್ರಮಗಳ ಕುರಿತು ನಿಖರ ವರದಿಗೆ ತಾಕೀತು ಮಾಡಿದೆ. ಸಂಸದ ತೇಜಸ್ವಿ ಸೂರ್ಯ ವಿರುದ್ಧ ಕೈಗೊಂಡ ಕ್ರಮಗಳ ಕುರಿತು ಸ್ಪಷ್ಟನೆ ನೀಡಲು ಕೊನೆಯ ಅವಕಾಶ ನೀಡಿದೆ.
ವಿಶೇಷ ತಂಡ ರಚಿಸಲು ನಿರ್ದೇಶನ :
ಕೊರೊನಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಲ್ಲಿ ಜಿಲ್ಲಾಡಳಿತ, ಪಾಲಿಕೆ ಹಾಗೂ ಮಾರ್ಷಲ್ಗಳು ವಿಫಲವಾಗಿರುವುದನ್ನು ಗಮನಿಸಿದ ಹೈಕೋರ್ಟ್, ಸ್ಪೆಷಲ್ ಟಾಸ್ಕ್ ಫೋರ್ಸ್ ರಚಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿದೆ. ಆದರೆ, ಸರ್ಕಾರ ಈವರೆಗೂ ವಿಶೇಷ ತಂಡ ರಚಿಸಿದಂತೆ ಕಾಣುತ್ತಿಲ್ಲ. ಇದರಿಂದಾಗಿಯೇ ಕೊರೊನಾ ನಿಯಂತ್ರಣ ಮಾರ್ಗಸೂಚಿಗಳನ್ನು ಜಾರಿ ಮಾಡುವುದೂ ಸಾಧ್ಯವಾಗಿಲ್ಲ.
ನವೆಂಬರ್ 5 ಕ್ಕೆ ಅರ್ಜಿ ವಿಚಾರಣೆ :
ಮಾರ್ಗಸೂಚಿಗಳ ಉಲ್ಲಂಘನೆಗೆ ಸಂಬಂಧಿಸಿದ ಪಿಐಎಲ್ ಅಕ್ಟೋಬರ್ 20 ರಂದು ವಿಚಾರಣೆ ನಡೆಸಿದ ಹೈಕೋರ್ಟ್, ಹಬ್ಬಗಳ ಸಂದರ್ಭದಲ್ಲಿ ಕೊರೊನಾ ಹರಡದಂತೆ ಎಲ್ಲ ಮುಂಜಾಗ್ರತೆಗಳನ್ನು ಕೈಗೊಳ್ಳುವಂತೆ ಆದೇಶಿಸಿದೆ. ಹಾಗೆಯೇ, ಅ. 23 ರಂದು ಆದೇಶ ನೀಡಿ, ಸಾರ್ವಜನಿಕ ಸಭೆ, ಮೆರವಣಿಗೆಗೆ ಅನುಮತಿ ನೀಡುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂಬ ಷರತ್ತು ವಿಧಿಸಬೇಕು. ಮಾಸ್ಕ್ ಧರಿಸುವ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಪೊಲೀಸರು ಮೇಲ್ವಿಚಾರಣೆ ನಡೆಸಬೇಕು ಎಂದು ನಿರ್ದೇಶಿಸಿದೆ. ಆದರೆ, ಎರಡೂ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಚುನಾವಣಾ ಅಬ್ಬರದಲ್ಲಿ ಮಾರ್ಗಸೂಚಿಗಳು ಯಾವುದೇ ಮುಲಾಜಿಲ್ಲದೇ ಗಾಳಿಗೆ ತೂರಿರುವುದು ಸ್ಪಷ್ಟವಾಗಿ ಕಂಡು ಬರುತ್ತಿದೆ.
ಈ ವಿಚಾರ ನವೆಂಬರ್ 5 ರಂದು ನಡೆಯುವ ವಿಚಾರಣೆ ವೇಳೆ ಮತ್ತೆ ಚರ್ಚೆಗೆ ಬರಲಿದೆ. ಈವರೆಗಿನ ಉಲ್ಲಂಘನೆಗಳಿಗೆ ಉತ್ತರಿಸಲು ಹೆಣಗಾಡಿದ್ದ ಸರ್ಕಾರ, ಚುನಾವಣೆ ಪ್ರಚಾರದ ವೇಳೆ ಆಗಿರುವ ಉಲ್ಲಂಘನೆಗಳಿಗೆ ಉತ್ತರಿಸುವುದು ಕಷ್ಟಸಾಧ್ಯ. ಇವೆಲ್ಲವನ್ನೂ ಗಮನಿಸಿದಾಗ ಸರ್ಕಾರ ಸಂಕಷ್ಟಕ್ಕೆ ಸಿಲುಕುವುದರಲ್ಲಿ ಯಾವುದೇ ಅನುಮಾನವಿಲ್ಲ.