ಬೆಂಗಳೂರು: ಜಯನಗರ ವಿಧಾನಸಭೆ ಕ್ಷೇತ್ರದ ಸಾರ್ವತ್ರಿಕ ಚುನಾವಣೆಯ 827 ಅಂಚೆ ಮತಗಳನ್ನು (ಪೋಸ್ಟಲ್ ಬ್ಯಾಲೆಟ್) ಮರು ಎಣಿಕೆ ಮಾಡುವಂತೆ ಕೋರಿ ಸಲ್ಲಿಸಲಾಗಿರುವ ಚುನಾವಣಾ ತಕರಾರು ಅರ್ಜಿ ಸಂಬಂಧ ಬಿಜೆಪಿ ಶಾಸಕ ಸಿ.ಕೆ.ರಾಮಮೂರ್ತಿ ಅವರಿಗೆ ಸಂಬಂಧಪಟ್ಟ ತಹಶೀಲ್ದಾರ್ ಅಥವಾ ವಿಧಾನಸಭೆ ಸಚಿವಾಲಯದಿಂದ ಸಮನ್ಸ್ ಜಾರಿಗೊಳಿಸುವಂತೆ ಹೈಕೋರ್ಟ್ ಇಂದು ಆದೇಶಿಸಿದೆ.
ಅಂಚೆ ಮತಗಳ ಮರು ಎಣಿಕೆಗೆ ನಿರ್ದೇಶನ ನೀಡಬೇಕು ಎಂದು ಕೋರಿ ಕಾಂಗ್ರೆಸ್‌ನ ಪರಾಜಿತ ಅಭ್ಯರ್ಥಿ ಸೌಮ್ಯ ರೆಡ್ಡಿ ಸಲ್ಲಿಸಿರುವ ಚುನಾವಣಾ ತಕರಾರು ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ರಾಚಯ್ಯ ಅವರಿದ್ದ ಏಕಸದಸ್ಯ ಪೀಠ ಸಮನ್ಸ್ ಜಾರಿ ಮಾಡಿ ವಿಚಾರಣೆ ಮುಂದೂಡಿತು.
ಈ ವೇಳೆ ಅರ್ಜಿದಾರರ ಪರ ವಕೀಲರು, ಆಗಸ್ಟ್ 1ರಂದು ಎಲ್ಲಾ ಪ್ರತಿವಾದಿಗಳಿಗೆ ನ್ಯಾಯಾಲಯ ಸಮನ್ಸ್ ಜಾರಿ ಮಾಡಿತ್ತು. ಆದರೆ, ಬಿಜೆಪಿಯ ಚುನಾಯಿತ ಅಭ್ಯರ್ಥಿ (ಹಾಲಿ ಶಾಸಕ) ಸಿ.ಕೆ. ರಾಮಮೂರ್ತಿ ಸೇರಿದಂತೆ ಇಬ್ಬರು ಪಕ್ಷೇತರ ಅಭ್ಯರ್ಥಿಗಳು ಸಮನ್ಸ್ ಸ್ವೀಕರಿಸಿಲ್ಲ ಎಂದು ನ್ಯಾಯಪೀಠದ ಗಮನಕ್ಕೆ ತಂದರು.
ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಸಿ.ಕೆ.ರಾಮಮೂರ್ತಿ ಅವರಿಗೆ ಸಂಬಂಧಪಟ್ಟ ಸ್ಥಳೀಯ ತಹಶೀಲ್ದಾರ್ ಇಲ್ಲವೇ ವಿಧಾನಸಭೆ ಸಚಿವಾಲಯದಿಂದ ಮತ್ತೊಮ್ಮೆ ಸಮನ್ಸ್ ಜಾರಿ ಮಾಡುವಂತೆ ನಿರ್ದೇಶನ ನೀಡಿತು. ಅಲ್ಲದೇ ಸಮನ್ಸ್ ಸ್ವೀಕರಿಸದ ಇಬ್ಬರು ಪಕ್ಷೇತರ ಅಭ್ಯರ್ಥಿಗಳಿಗೂ ಎರಡನೇ ಸಮನ್ಸ್ ಜಾರಿಗೆ ನಿರ್ದೇಶನ ನೀಡಿದ ನ್ಯಾಯಪೀಠ ವಿಚಾರಣೆಯನ್ನು ಸೆಪ್ಟೆಂಬರ್ 7ಕ್ಕೆ ಮುಂದೂಡಿತು.
ಪ್ರಕರಣದ ಹಿನ್ನೆಲೆ: ಜಯನಗರ ವಿಧಾನಸಭಾ ಕ್ಷೇತ್ರಕ್ಕೆ 2023ರ ಮೇ 10ಕ್ಕೆ ಚುನಾವಣೆ ನಡೆದು ಮೇ 13ರಂದು ಮತ ಎಣಿಕೆ ನಡೆಯಿತು. ಈ ಕ್ಷೇತ್ರದಲ್ಲಿ ಒಟ್ಟು 827 ಅಂಚೆ ಮತಗಳು ಚಲಾವಣೆಯಾಗಿದ್ದವು. ಈ ಪೈಕಿ 198 ಮತಗಳನ್ನು ತಿರಸ್ಕೃತಗೊಳಿಸಿ 629 ಮತಗಳನ್ನು ಮಾತ್ರ ಪರಿಗಣಿಸಲಾಗಿತ್ತು. ಅದರಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ 164 ಮತ್ತು ಬಿಜೆಪಿಗೆ ಅಭ್ಯರ್ಥಿಗೆ 415 ಮತಗಳು ಬಂದಿದ್ದವು. ಮತ ಎಣಿಕೆಯ ಕೊನೆಯ 16ನೇ ಸುತ್ತಿನ ಎಣಿಕೆ ಬಳಿಕ ಬಿಜೆಪಿ ಅಭ್ಯರ್ಥಿ 57,297 ಮತಗಳು ಹಾಗೂ ಕಾಂಗ್ರೆಸ್ ಅಭ್ಯರ್ಥಿ 57,591 ಮತಗಳನ್ನು ಪಡೆದಿದ್ದರು. ಕಾಂಗ್ರೆಸ್ ಅಭ್ಯರ್ಥಿ 294 ಮತಗಳಿಂದ ಮುನ್ನಡೆ ಸಾಧಿಸಿದ್ದರು.
ಆದರೆ, ತಿರಸ್ಕೃತ ಅಂಚೆ ಮತಗಳನ್ನು ಮರುಪರಿಶೀಲಿಸಲು ಚುನಾವಣಾ ವೀಕ್ಷಕರು ಸೂಚಿಸಿದರು. ಅದರಂತೆ ತಿರಸ್ಕೃತ ಅಂಚೆ ಮತಗಳ ಮರು ಪರಿಶೀಲನೆ ನಡೆಯಿತು. ಮಧ್ಯಾಹ್ನ 3.45ರಿಂದ ರಾತ್ರಿ 8.45ರವರೆಗೆ ಹಲವು ಸುತ್ತು ತಿರಸ್ಕೃತ ಮತಗಳ ಮರುಪರಿಶೀಲನೆ ನಡೆಯಿತು. ಇದರಿಂದ ಫಲಿತಾಂಶದಲ್ಲಿ ಏರಿಳಿತ ಆಯಿತು. ಅಂತಿಮವಾಗಿ ಬಿಜೆಪಿ ಅಭ್ಯರ್ಥಿಯನ್ನು ಚುನಾಯಿತ ಎಂದು ಘೋಷಿಸಲಾಗಿತ್ತು.
ಇದನ್ನು ಪ್ರಶ್ನಿಸಿ ಅರ್ಜಿದಾರರು, ಅಂಚೆ ಮತಗಳ ಎಣಿಕೆಯ ಪ್ರತಿ ಸುತ್ತಿನ ವಿಡಿಯೋ ಚಿತ್ರೀಕರಣದ ದಾಖಲೆಗಳನ್ನು ಪರಿಶೀಲಿಸಬೇಕು. ಎಲ್ಲಾ 827 ಅಂಚೆ ಮತಗಳ ಮರು ಎಣಿಕೆಗೆ ಆದೇಶಿಸಬೇಕು. ಅಸಿಂಧು ಮತಗಳನ್ನು ಪಡೆದು ಚುನಾಯಿತಗೊಂಡಿರುವ ಬಿಜೆಪಿ ಅಭ್ಯರ್ಥಿಯ ಆಯ್ಕೆಯನ್ನು ಅಸಿಂಧುಗೊಳಿಸಬೇಕು ಮತ್ತು ಕಾಂಗ್ರೆಸ್ ಅಭ್ಯರ್ಥಿಯ ಆಯ್ಕೆಯನ್ನು ಘೋಷಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಿದ್ದರು.
ಇದನ್ನೂ ಓದಿ : ಮುರುಘಾಮಠಕ್ಕೆ ಆಡಳಿತಾಧಿಕಾರಿ ನೇಮಕ ಪ್ರಶ್ನಿಸಿದ್ದ ಮೇಲ್ಮನವಿ ಅರ್ಜಿ ತೀರ್ಪು ಕಾಯ್ದಿರಿಸಿದ ಹೈಕೋರ್ಟ್