ಬೆಂಗಳೂರು: ಅಧಿಕೃತ ಪರವಾನಿಗೆ ಹೊಂದಿದ್ದರೂ ಪಟಾಕಿ ದಾಸ್ತಾನು ವಶಕ್ಕೆ ಪಡೆದಿರುವ ಕಂದಾಯ ನಿರೀಕ್ಷಕರ ಕ್ರಮ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ಸಂಬಂಧ ಪರಿಶೀಲನೆ ನಡೆಸಿ ವರದಿ ಸಲ್ಲಿಸಲು ಸ್ಫೋಟಕ ನಿಯಂತ್ರಣಾಧಿಕಾರಿಗಳಿಗೆ ಹೈಕೋರ್ಟ್ ಸೂಚನೆ ನೀಡಿದೆ.
ಪಟಾಕಿ ದಾಸ್ತಾನು ಜಪ್ತಿ ಮಾಡಿ ಮಾರಾಟ ಮಳಿಗೆಗೆ ಬೀಗ ಜಡಿದಿರುವುದನ್ನು ಪ್ರಶ್ನಿಸಿ ಪಟಾಕಿ ಮಾರಾಟ ಸಂಸ್ಥೆ ತಿರುಮಲ ಟ್ರೇಡರ್ಸ್‌ನ ಪಾಲುದಾರ ವೆಂಕಟೇಶ್ ಹಾಗೂ ವಿ. ಸತ್ಯನಾರಾಯಣ ಎಂಬುವರು ಸೇರಿ ಇತರೆ ನಾಲ್ವರು ಪಟಾಕಿ ಮಾರಾಟಗಾರರು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಏಕ ಸದಸ್ಯ ನ್ಯಾಯಪೀಠ ಈ ಸೂಚನೆ ನೀಡಿದೆ.
ಅಲ್ಲದೆ, ಸ್ಫೋಟಕಗಳ ಮುಖ್ಯ ನಿಯಂತ್ರಣಾಧಿಕಾರಿ ಸ್ಥಳಪರಿಶೀಲನೆ ನಡೆಸಿ ಪಟಾಕಿ ದಾಸ್ತಾನು ಮಳಿಗೆಗಳ ಸುರಕ್ಷತೆ ಬಗ್ಗೆ ಇದೇ ತಿಂಗಳ 6 ರೊಳಗೆ ವರದಿ ಸಲ್ಲಿಸಬೇಕು ಎಂದು ನಿರ್ದೇಶನ ನೀಡಿ ವಿಚಾರಣೆ ಮುಂದೂಡಿತು.
ಪ್ರಕರಣದ ಹಿನ್ನೆಲೆ ಏನು?: ತಿರುಮಲ ಟ್ರೇಡರ್ಸ್ 1932ರ ಪಾಲುದಾರಿಕೆ ಕಾಯ್ದೆಯಡಿ ನೋಂದಣಿಯಾಗಿದೆ. ಬೆಂಗಳೂರು ದಕ್ಷಿಣ ತಾಲೂಕು ತಾವರಕೆರೆ ಹೋಬಳಿಯ ಎಲಚಿಗುಪ್ಪೆ ಗ್ರಾಮದ ಸರ್ವೆ ನಂಬರ್ 17/2ರಲ್ಲಿ ಪಟಾಕಿ ಮಾರಾಟ ಮಳಿಗೆ ಹೊಂದಿದ್ದು, ಕಳೆದ 25 ವರ್ಷಗಳಿಂದ ಪಟಾಕಿ ಮಾರಾಟದಲ್ಲಿ ತೊಡಗಿಸಿಕೊಂಡಿದೆ. ಸ್ಫೋಟಕಗಳ ಕಾಯ್ದೆ ಅನ್ವಯ ಅಗತ್ಯ ಪರವಾನಿಗೆಗಳನ್ನು ಹೊಂದಲಾಗಿದೆ. ಈಗಿರುವ ಪರವಾನಿಗೆ ಅವಧಿ 2024ರ ಮಾ.31ಕ್ಕೆ ಕೊನೆಗೊಳ್ಳಲಿದೆ.
ಹೀಗಿದ್ದರೂ, ತಾವರಕೆರೆ ಹೋಬಳಿಯ ಕಂದಾಯ ನಿರೀಕ್ಷಕರು ಯಾವುದೇ ಪೂರ್ವ ನೋಟಿಸ್ ಕೊಡದೆ, ಯಾವುದೇ ಕಾನೂನು ಅಧಿಕಾರವಿಲ್ಲದೆ ಏಕಾಏಕಿ ಪಟಾಕಿ ದಾಸ್ತಾನು ಜಪ್ತಿ ಮಾಡಿ ಮಾರಾಟ ಮಳಿಗೆಗೆ ಬೀಗ ಜಡಿದಿದ್ದಾರೆ. ಅಲ್ಲದೆ, ಎಫ್‌ಐಆರ್ ಸಹ ದಾಖಲಿಸಿದ್ದಾರೆ ಎಂದು ಅರ್ಜಿಯಲ್ಲಿ ದೂರಲಾಗಿದೆ.
ಪಟಾಕಿ ಮಾರಾಟಗಾರರಿಗೆ ದೀಪಾವಳಿ ಸುಗ್ಗಿಯ ಕಾಲ. ಈ ತಿಂಗಳಲ್ಲಿ ಮಾತ್ರ ಪಟಾಕಿ ಮಾರಾಟಗಾರರಿಗೆ ಹೆಚ್ಚು ವ್ಯಾಪಾರ ಇರುತ್ತದೆ. ಇಂತಹ ಸಂದರ್ಭದಲ್ಲೇ ದಾಸ್ತಾನು ಜಪ್ತಿ ಮಾಡಿ, ಮಳಿಗೆಗೆ ಬೀಗ ಜಡಿಯಲಾಗಿದೆ. ಒಂದೊಮ್ಮೆ ದಾಸ್ತಾನು ಜಪ್ತಿ ಹಾಗೂ ಬೀಗ ತೆರವುಗೊಳಿಸದಿದ್ದರೆ ದೊಡ್ಡ ಆರ್ಥಿಕ ನಷ್ಟ ಅನುಭವಿಸಬೇಕಾಗುತ್ತದೆ.
ದಾಸ್ತಾನು ಇರುವ ಪಟಾಕಿಗಳನ್ನು ಈ ನಿಗದಿತ ಅವಧಿಯಲ್ಲಿ ಮಾರಾಟ ಮಾಡದಿದ್ದರೆ ತೇವಾಂಶದ ಸಾಧ್ಯತೆಗಳಿದ್ದು, ಬಳಕೆಗೆ ಬರುವುದಿಲ್ಲ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ. ಆದ್ದರಿಂದ ಪೊಲೀಸರು ಹಾಗೂ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಕಂದಾಯ ನಿರೀಕ್ಷಕರು ದಾಸ್ತಾನು ಜಪ್ತಿ ಮಾಡಿ ಮಾರಾಟ ಮಳಿಗೆಗೆ ಬೀಗ ಜಡಿದಿರುವುದುನು ಕಾನೂನು ಬಾಹಿರವೆಂದು ಘೋಷಿಸಬೇಕು. ಅಗತ್ಯ ಪರವಾನಿಗೆಗಳನ್ನು ಪಡೆದುಕೊಂಡು ನಡೆಸಲಾಗುತ್ತಿರುವ ವ್ಯಾಪಾರದಲ್ಲಿ ಪೊಲೀಸರು, ಜಿಲ್ಲಾಧಿಕಾರಿಗಳು ಹಾಗೂ ಇತರ ಸಂಬಂಧಪಟ್ಟ ಅಧಿಕಾರಿಗಳು ಅನಗತ್ಯವಾಗಿ ಹಸ್ತಕ್ಷೇಪ ಮಾಡದಂತೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದರು.
ಅಲ್ಲದೆ, ಅರ್ಜಿ ಇತ್ಯರ್ಥಗೊಳ್ಳುವ ತನಕ ಪಟಾಕಿಗಳ ಮಾರಾಟಕ್ಕೆ ಅವಕಾಶವಾಗುವಂತೆ ಬೀಗ ತೆರವುಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಮಧ್ಯಂತರ ಮನವಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಮುರುಘಾ ಮಠದ ಶಿವಮೂರ್ತಿ ಶ್ರೀಗಳ ವಿರುದ್ದದ ಪಿತೂರಿ ಆರೋಪ: ಬಸವರಾಜನ್, ಸೌಭಾಗ್ಯ ಪ್ರಕರಣ ರದ್ದುಪಡಿಸಿದ ಹೈಕೋರ್ಟ್