ಬೆಂಗಳೂರು: ಮರಾಠಿ ಪೇಶ್ವೆಗಳ ಡಿಎನ್ಎ ಬಗ್ಗೆ ನಾನು ಕೊಟ್ಟ ಹೇಳಿಕೆಯನ್ನು ವಾಪಸ್ ಪಡೆಯುವ ಪ್ರಶ್ನೆಯೇ ಇಲ್ಲ, ಕ್ಷಮೆಯನ್ನೂ ಕೇಳುವುದಿಲ್ಲ. ತಾಕತ್ತಿದ್ದರೆ ನಾನು ಹೇಳಿದ ವ್ಯಕ್ತಿಯನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಿ ಬಿಜೆಪಿಯವರು ಚುನಾವಣೆಗೆ ಹೋಗಲಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನೇರ ಸವಾಲು ಹಾಕಿದರು.
ಪಕ್ಷದ ಕಚೇರಿ ಜೆ.ಪಿ ಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಪ್ರಹ್ಲಾದ್ ಜೋಶಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ತಮ್ಮ ಹೇಳಿಕೆಯನ್ನು ತಿರುಚಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು. ಬಿಜೆಪಿಯಿಂದ ಯಾರು ಮುಖ್ಯಮಂತ್ರಿ ಆಗಬೇಕು ಎಂದು ನಾನು ಹೇಳಿಲ್ಲ. ಅವರು ಯಾರನ್ನೂ ಬೇಕಾದರೂ ಸಿಎಂ ಮಾಡಿಕೊಳ್ಳಲಿ. ಬೇಕಾದರೆ ಪ್ರಹ್ಲಾದ್ ಜೋಶಿ ಅವರನ್ನು ಸಿಎಂ ಮಾಡುತ್ತೇವೆ ಎಂದು ಘೋಷಣೆ ಮಾಡಲಿ ಎಂದರು.
ಬ್ರಾಹ್ಮಣ, ದಲಿತ ಯಾವುದೇ ಸಮಾಜಕ್ಕೂ ಅಪಮಾನ ಮಾಡುವ ಕುಟುಂಬದಿಂದ ನಾನು ಬಂದಿಲ್ಲ. ಈ ದೇಶದ ವ್ಯವಸ್ಥೆಯಲ್ಲಿ ಯಾರು ಬೇಕಾದರೂ ಮುಖ್ಯಮಂತ್ರಿ, ಪ್ರಧಾನಿ ಆಗಬಹುದು. ಆದರೆ ನಿರ್ದಿಷ್ಟವಾದ ಈ ವ್ಯಕ್ತಿಯನ್ನು ಬಿಜೆಪಿಯವರು ಸಿಎಂ ಮಾಡಲು ಹೊರಟಿದ್ದಾರೆ. ನನಗೆ ಅವರ ಬಗ್ಗೆ ತಕರಾರು ಇಲ್ಲ. ತಕರಾರು ಇರುವುದು ಅವರ ಮೂಲದ ಬಗ್ಗೆ ಎಂದು ಹೇಳಿದರು.
ಕಳೆದ ಮೂರು ವರ್ಷದಿಂದ ನಮ್ಮ ರಾಜ್ಯದಲ್ಲಿ ನಡೆದ ಒಂದೊಂದು ಘಟನೆ ನೋಡಿ. ಕರ್ನಾಟಕಕ್ಕೂ ಸಾವರ್ಕರ್‌ಗೂ ಏನು ಸಂಬಂಧ? ಸುವರ್ಣಸೌಧದಲ್ಲೂ ಸಾವರ್ಕರ್ ಫೋಟೋ ಹಾಕಲಾಯಿತು. ಈಗ ಕನ್ನಡಿಗರ ಮೇಲೆ ದಬ್ಬಾಳಿಕೆ ನಡೆಸಿದ ಶೃಂಗೇರಿ ಮಠದ ಮೇಲೆ ದಾಳಿ ನಡೆಸಿದ ಶಿವಾಜಿ ಮತ್ತು ಗಾಂಧೀಜಿ ಅವರನ್ನು ಹತ್ಯೆ ಮಾಡಿದ ಮರಾಠಿ ಪೇಶ್ವೆಗಳ ಮೂಲದ ವ್ಯಕ್ತಿಯನ್ನು ರಾಜ್ಯದ ಮೇಲೆ ಹೇರಲು ಬಿಜೆಪಿ ಹೊರಟಿದೆ. ಅದಕ್ಕೆ ನನ್ನ ವಿರೋಧವಿದೆ ಎಂದರು.
ಬಿಜೆಪಿ ಸಮಾಜ ಒಡೆಯುವ ಕೆಲಸಕ್ಕೆ ಕೈ ಹಾಕಿದೆ. ಮೀಸಲಾತಿ ವಿಚಾರದಲ್ಲೂ ಗೊಂದಲ ಸೃಷ್ಟಿ ಮಾಡಿದ್ದಾರೆ. ಮೂಗಿಗೆ ತುಪ್ಪ ಸವರುವ ಜನರನ್ನು ನಾವು ನೋಡಿದ್ದೇವೆ. ಇವರು ಈಗ ತಲೆಗೆ ತುಪ್ಪ ಸವರಿದ್ದಾರೆ. ಜನರಿಗೆ ವಾಸನೆ ಕೂಡ ಗೊತ್ತಾಗಬಾರದು ಎನ್ನುವ ಉದ್ದೇಶ ಇವರದ್ದು. ಹಿಂಬಾಗಿಲಿನಿಂದ ರಾಜಕೀಯ ಮಾಡ್ತಾ ಇದ್ದಾರೆ ಎಂದು ಟೀಕಾಪ್ರಹಾರ ನಡೆಸಿದರು.
ಇದನ್ನೂಓದಿ:ನೀವು ಬ್ರಿಟೀಷರಂತೆ ಒಡೆದಾಳುವ ನೀತಿ ಅನುಸರಿಸುತ್ತಿದ್ದೀರಿ: ಸಚಿವ ಆರ್.ಅಶೋಕ್