ಬೆಂಗಳೂರು: ಹೆಡ್‌ಫೋನ್ ವಿಚಾರಕ್ಕೆ ನಡೆದ ಗಲಾಟೆ ಒಬ್ಬ ಯುವಕನ ಕೊಲೆಯಲ್ಲಿ ಮುಗಿದ ಘಟನೆ ಪರಪ್ಪನ ಅಗ್ರಹಾರದಲ್ಲಿ ನಡೆದಿದೆ. ತಮಿಳುನಾಡು ಮೂಲದ ಕಾರ್ತಿಕ್(27) ಕೊಲೆಯಾದ ವ್ಯಕ್ತಿ. ಈ ಸಂಬಂಧ ರಜನೀಶ್ ಮತ್ತು ರವಿ ಎಂಬುವರನ್ನು ಬಂಧಿಸಲಾಗಿದೆ. ಪರಾರಿಯಾಗಿರುವ ಮತ್ತಿಬ್ಬರಿಗಾಗಿ ಶೋಧ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯವರಾದ ಕಾರ್ತಿಕ್, ರಜನೀಶ್ ಮತ್ತು ರವಿ ಎಂಬುವರು ದೊಡ್ಡನಾಗಮಂಗಲದ ಬಾಲಾಜಿ ಲೇಔಟ್‌ನಲ್ಲಿ ನಿರ್ಮಾಣ ಹಂತದ ಮನೆಯಲ್ಲಿ ಪೇಟಿಂಗ್ ಕೆಲಸ ಮಾಡುತ್ತಿದ್ದರು. ಅಲ್ಲಿಯೇ ವಾಸವಾಗಿದ್ದರು. ಡಿ. 31ರಂದು ಆರೋಪಿ ರಜನೀಶ್ ಹುಟ್ಟುಹಬ್ಬ ಹಾಗೂ ಹೊಸ ವರ್ಷದ ಸಂಭ್ರಮಾಚರಣೆಗಾಗಿ ನಿರ್ಮಾಣ ಹಂತದ ಕಟ್ಟಡದಲ್ಲೇ ಕಾರ್ತಿಕ್, ರವಿ ಹಾಗೂ ಇತರರು ಪಾರ್ಟಿ ಮಾಡಿದ್ದಾರೆ. ಎಲ್ಲರೂ ಕಂಠಪೂರ್ತಿ ಮದ್ಯ ಸೇವಿಸಿದ್ದಾರೆ.
ಆಗ ರಜನೀಶ್‌ನ ಹೆಡ್‌ಪೋನ್ ಅನ್ನು ಕಾರ್ತಿಕ್ ತೆಗೆದುಕೊಂಡಿದ್ದಾನೆ. ಅದೇ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆದಿದೆ. ರಜನೀಶ್ ಸಹಾಯಕ್ಕೆ ಬಂದ ರವಿ ಹಾಗೂ ಇತರರು ಕಾರ್ತಿಕ್ ಮೇಲೆ ಹಲ್ಲೆ ನಡೆಸಿದ್ದಾನೆ. ಕೈ, ಕಾಲು ಮತ್ತು ಗಾಜಿನಿಂದ ಕಾರ್ತಿಕ್ ಮೇಲೆ ಮನಸೋ ಇಚ್ಚೆ ಹಲ್ಲೆ ನಡೆಸಿದ್ದರು. ಆನಂತರ ಎಲ್ಲರೂ ಮಲಗಿದ್ದರು.
ಆದರೆ ಮರುದಿನ ಬೆಳಗ್ಗೆ ಕಾರ್ತಿಕ್ ಎದ್ದಿರಲಿಲ್ಲ. ಬಳಿಕ ಇತರ ಕಾರ್ಮಿಕರು ಕಾರ್ತಿಕ್‌ನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಪರೀಕ್ಷಿಸಿದ ವೈದ್ಯರು ಮೃತಪಟ್ಟಿದ್ದಾನೆ ಎಂದು ದೃಢಪಡಿಸಿದ್ದರು. ಪ್ರಕರಣ ದಾಖಲಿಸಿಕೊಂಡು ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಇತರೆ ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ರೈಲ್ವೇ ಸೇತುವೆ ಮೇಲೆ ರೀಲ್ಸ್ ಶೂಟ್ ಮಾಡಲು ಹೋಗಿ ಇಬ್ಬರು ಸಾವು