ಬೆಂಗಳೂರು: ಪತ್ನಿಯ ಸ್ನೇಹಿತೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ವ್ಯಕ್ತಿಯೋರ್ವ ಆಕೆ ಪರಪುರುಷನೊಂದಿಗೆ ಓಡಾಡುತ್ತಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿ, ಲಾಡ್ಜ್‌ಗೆ ಕರೆದೊಯ್ದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಈ ಘಟನೆ ಯಶವಂತಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಒಡಿಶಾ ಮೂಲದ ದೀಪಾ ಬದನ್ ಕೊಲೆಯಾದ ಯುವತಿ. ಹತ್ಯೆ ಆರೋಪಿ ಅನ್ಮಲ್ ರತನ್ ಕಂದರ್ ಬಂಧನ ಭೀತಿಯಿಂದ ತಲೆಮರೆಸಿಕೊಂಡಿದ್ದು, ಪೊಲೀಸರು ಶೋಧ ಕೈಗೊಂಡಿದ್ದಾರೆ. ಯಶವಂತಪುರ ರೈಲ್ವೆ ಠಾಣೆ ಬಳಿ ಬೆಂಗಳೂರು ರೆಸಿಡೆನ್ಸಿ ಲಾಡ್ಜ್ನಲ್ಲಿ ಜೂನ್ 9ರಂದು ಯುವತಿ ಕೊಲೆಯಾಗಿದ್ದಳು. ಮಾರನೇ ದಿನ ಪೊಲೀಸರಿಗೆ ವಿಷಯ ಗೊತ್ತಾಗಿದ್ದು, ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.
ತಲೆಮರೆಸಿಕೊಂಡಿರುವ ಆರೋಪಿ ಅನ್ಮಲ್ ಎರಡು ವರ್ಷಗಳ ಹಿಂದೆ ದೀಪಾ ಬದನ್ಳ ಸ್ನೇಹಿತೆಯನ್ನು ಪ್ರೀತಿಸಿ ವಿವಾಹ ಮಾಡಿಕೊಂಡಿದ್ದ. ಬೆಂಗಳೂರಿನ ಜೀವನ್‌ಭೀಮಾನಗರದಲ್ಲಿ ದಂಪತಿ ವಾಸವಿದ್ದರು. ಕೊಲೆಯಾದ ದೀಪಾ ಹಾಗೂ ಆರೋಪಿಯ ಹೆಂಡತಿ ಒಡಿಶಾದಲ್ಲಿ ಕಾಲೇಜು ಸಹಪಾಠಿಗಳು. ಇದೇ ಪರಿಚಯದ ಮೇರೆಗೆ ದೀಪಾ ಕೂಡ ಬೆಂಗಳೂರಿಗೆ ಬಂದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು.
ಆಗಾಗ ಗೆಳತಿ ಮನೆಗೆ ದೀಪಾ ಬರುತ್ತಿದ್ದಳು. ಈ ನಡುವೆ ಆರೋಪಿ ಅನ್ಮಲ್ ಹಾಗೂ ದೀಪಾ ಸ್ನೇಹಿತರಾಗಿದ್ದರು. ಇದೇ ಒಡನಾಟವು ಆತ್ಮೀಯತೆ ಹೆಚ್ಚಾಗಲು ಕಾರಣವಾಗಿತ್ತು. ಅಲ್ಲದೆ, ಇಬ್ಬರೂ ದೈಹಿಕ ಸಂಬಂಧವನ್ನೂ ಬೆಳೆಸಿಕೊಂಡಿದ್ದರು ಎನ್ನಲಾಗುತ್ತಿದೆ.
ಆದರೆ, ಇತ್ತೀಚೆಗೆ ದೀಪಾ ತನ್ನ ಫೋನ್ಗೆ ಸರಿಯಾಗಿ ಪ್ರತಿಕ್ರಿಯಿಸುತ್ತಿಲ್ಲ ಎಂದು ಆರೋಪಿಯು ಅಸಮಾಧಾನಗೊಂಡಿದ್ದ. ಜೂನ್ 9ರಂದು ಆಕೆಗೆ ಕರೆ ಮಾಡಿ ಲಾಡ್ಜ್ ಕರೆಯಿಸಿಕೊಂಡಿದ್ದ. ಈ ವೇಳೆ ಬೇರೊಬ್ಬನೊಂದಿಗೆ ಓಡಾಡುತ್ತೀಯಾ ಎಂದು ಕ್ಯಾತೆ ತೆಗೆದು ಜಗಳ ಮಾಡಿದ್ದ. ಕೋಪದಲ್ಲಿ ತಲೆದಿಂಬಿನಿಂದ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದು, ಬಳಿಕ ರೂಮ್ಗೆ ಬೀಗ ಹಾಕಿಕೊಂಡು ಪರಾರಿಯಾಗಿದ್ದಾನೆ.
ಮಾರನೇ ದಿನ ರೂಮ್ ಬಾಗಿಲು ತೆರೆಯದಿದ್ದಾಗ ಲಾಡ್ಜ್ ಸಿಬ್ಬಂದಿ ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅದರಂತೆ ಸ್ಥಳಕ್ಕೆ ಬಂದ ಪೊಲೀಸರು ಬೀಗ ಮುರಿದು ಪರಿಶೀಲಿಸಿದಾಗ ಯುವತಿ ಕೊಲೆಯಾಗಿರುವ ಸಂಗತಿ ಬಯಲಾಗಿದೆ.
ಇದನ್ನೂ ಓದಿ: ಡ್ರಗ್ಸ್ ಪಾರ್ಟಿ: ಸಿದ್ದಾಂತ್ ಕಪೂರ್ ಸೇರಿ ಐವರನ್ನು ಕೋರ್ಟ್‌ಗೆ ಹಾಜರುಪಡಿಸುವ ಸಾಧ್ಯತೆ