ಬೆಂಗಳೂರು: ಸ್ವಾತಂತ್ರ್ಯೋತ್ಸವದ ದಿನ ರಾತ್ರಿ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಿಕ್ಕಿಂ ಮೂಲದ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣವನ್ನು ಬೆನ್ನುಬಿದ್ದ ಪೊಲೀಸರು, ಅಸಲಿ ಕಥೆಯನ್ನು ಬಯಲು ಮಾಡಿದ್ದಾರೆ. ಹಲ್ಲೆಗೊಳಗಾದ ವ್ಯಕ್ತಿಯೇ ಮದ್ಯದ ಅಮಲಿನಲ್ಲಿ ಬಿದ್ದು ಕಟ್ಟಿದ್ದ ಕಥೆ ಇದು ಎಂದು ಬಹಿರಂಗಪಡಿಸಿದ್ದಾರೆ.
ದಿನೇಶ್ ಸುಬ್ಬಾ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು, ತನಿಖೆ ಕೈಗೊಂಡಾಗ ಆತ ತಾನೇ ಬಿದ್ದು, ನಂತರ ಪೊಲೀಸರೆದುರು ಸುಳ್ಳು ಕಥೆ ಕಟ್ಟಿರುವುದು ಬಯಲಾಗಿದೆ ಎಂದು ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ.ಬಾಬಾ ತಿಳಿಸಿದ್ದಾರೆ.
ಈ ಬಗ್ಗೆ ಶನಿವಾರ ಸಂಜೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಆಗಸ್ಟ್ 15ರಂದು ರಾತ್ರಿ ಸ್ನೇಹಿತರ ಜೊತೆ ಪಾರ್ಟಿ ಮಾಡಿದ್ದ ದಿನೇಶ್ ಸುಬ್ಬಾ, ಕುಡಿದ ಅಮಲಿನಲ್ಲಿ ಮನೆಯತ್ತ ಹೊರಟಿದ್ದ. ಈ ವೇಳೆ ಮಾರ್ಗ ಮಧ್ಯೆ ಬಾಗಿಲು ಹಾಕಿದ್ದ ಜ್ಯೂಸ್ ಸೆಂಟರ್ ಅನ್ನು ಹತ್ತಿ ಒಳಗಡೆ ಹೋಗಲು ಪ್ರಯತ್ನ ನಡೆಸಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ. ಈ ವೇಳೆ ಗಮನಿಸಿದ ಸೆಕ್ಯುರಿಟಿ ಸಿಬ್ಬಂದಿಯೊಬ್ಬರು ಪೊಲೀಸ್ ಕಂಟ್ರೋಲ್ ರೂಮಿಗೆ ಮಾಹಿತಿ ರವಾನಿಸಿದ್ದರು. ಆದರೆ, ಸ್ಥಳಕ್ಕೆ ಬಂದ ಪೊಲೀಸರ ಬಳಿ ದಿನೇಶ್, ಸುಳ್ಳು ಕಥೆಯೊಂದನ್ನು ಹೇಳಿದ್ದ. ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ, ದಿನೇಶ್ ಹೇಳಿದ ಸಮಯದಲ್ಲಿ, ಆ ಸ್ಥಳದಲ್ಲಿ ಯಾರೂ ಸಹ ಬಂದಿರುವುದು ಪತ್ತೆಯಾಗಿರಲಿಲ್ಲ. ಮತ್ತಷ್ಟು ವಿಚಾರಣೆ ಕೈಗೊಂಡಾಗ ಆತ ಸುಳ್ಳು ಹೇಳಿರುವುದು ಬಯಲಾಗಿದೆ ಎಂದು ಡಿಸಿಪಿ ಸಿ.ಕೆ.ಬಾಬಾ ತಿಳಿಸಿದ್ದಾರೆ.
ಸುಳ್ಳು ಕಥೆ ಕಟ್ಟಿದ್ದ ದಿನೇಶ್ ಸುಬ್ಬಾ: ಸೋಮವಾರ ವಿವಾಹ ವಾರ್ಷಿಕೋತ್ಸವ ಇರುವ ಕಾರಣ ಆಗಸ್ಟ್ 15ರಂದು ರಾತ್ರಿ ಎಲೆಕ್ಟ್ರಾನಿಕ್ ಸಿಟಿ ಬಳಿ ಸ್ನೇಹಿತರಿಗೆ ಪಾರ್ಟಿ ನೀಡಿದ್ದೆ. ಪಾರ್ಟಿ ಮುಗಿಸಿ ರಾತ್ರಿ 3 ಗಂಟೆಯ ಸುಮಾರಿಗೆ ರಸ್ತೆಯಲ್ಲಿ ಮನೆಯತ್ತ ಹೊರಟಿದ್ದಾಗ ಚೀನಾದವನೆಂದು ತಿಳಿದು ದುಷ್ಕರ್ಮಿಗಳು ಹಲ್ಲೆ ಮಾಡಿದ್ದಾರೆ. ಆದರೆ, ತಾನು ಚೀನಾದವನಲ್ಲ, ಭಾರತೀಯನೆಂದೂ ಎಷ್ಟು ಅಂಗಲಾಚಿದರೂ ಸಹ ಮೂವರು ದುಷ್ಕರ್ಮಿಗಳು ತನ್ನ ಮೇಲೆ ಕಬ್ಬಿಣದ ರಾಡ್ನಿಂದ ಅಮಾನವೀಯವಾಗಿ ಹಲ್ಲೆಗೈದಿದ್ದಾರೆ ಎಂದು ಸುಳ್ಳು ಕಥೆ ಕಟ್ಟಿ ದಿನೇಶ್ ಸುಬ್ಬಾ ದೂರು ನೀಡಿದ್ದ.
7 ತಿಂಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ದಿನೇಶ್ ಸುಬ್ಬಾ, ರೆಸ್ಟೋರೆಂಟ್ ಒಂದರಲ್ಲಿ ಕೆಲಸ ಮಾಡಿಕೊಂಡು ಪತ್ನಿ ಹಾಗೂ ಮೂರು ತಿಂಗಳ ಮಗುವಿನೊಂದಿಗೆ ದೊಡ್ಡ ತೋಗೂರಿನಲ್ಲಿ ವಾಸವಿದ್ದಾನೆ.
ಇದನ್ನೂಓದಿ: ಬೆಳಗಾವಿ: ಆಸ್ತಿಗಾಗಿ ಉಪ್ಪಿಟ್ಟಿನಲ್ಲಿ ಗಂಡನಿಗೆ ವಿಷ ಹಾಕಿದ ಪತ್ನಿ; ಪತಿ ಐಸಿಯುಗೆ, ನಾಯಿ-ಬೆಕ್ಕು ಸಾವು