ಬೆಂಗಳೂರು: ಫೇಸ್ಬುಕ್ನಲ್ಲಿ ಪರಿಚಯವಾದ ಯುವಕನೊಬ್ಬ ಪ್ರೀತಿಸುವಂತೆ ಯುವತಿಯ ಹಿಂದೆ ಬಿದ್ದಿದ್ದಲ್ಲದೆ, ಆಕೆಗೆ ತನ್ನೊಂದಿಗೆ ಮಲಗುವಂತೆ ಕಿರುಕುಳ ನೀಡಿದ ಆರೋಪದಡಿ ಆತನನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸರು ಬಂಧಿಸಿದ್ದಾರೆ.
ಪಾಪರೆಡ್ಡಿ ಪಾಳ್ಯದ ನಿವಾಸಿಯಾಗಿರುವ 27 ವರ್ಷದ ಯುವತಿ ನೀಡಿದ ದೂರಿನ ಮೇರೆಗೆ ಆರೋಪಿ ಶ್ರವಣ್ ಕುಮಾರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕ್ಲಿನಿಕ್‌ವೊಂದರಲ್ಲಿ ಕೆಲಸ ಮಾಡುತ್ತಿರುವ ಯುವತಿಗೆ ಕಳೆದ 3 ವರ್ಷಗಳ ಹಿಂದೆ ಶ್ರವಣ್ ಫೇಸ್ಬುಕ್ನಲ್ಲಿ ಪರಿಚಯವಾಗಿದ್ದ. ನಾನು ಖಾಯಿಲೆಯಿಂದ ಬಳಲುತ್ತಿದ್ದು, ಹೆಚ್ಚು ದಿನ ಬದುಕುಳಿಯುವುದಿಲ್ಲ. ಮೂಗು, ಬಾಯಿಯಲ್ಲಿ ಆಗಾಗ ರಕ್ತ ಬರುತ್ತದೆ ಎಂದು ತನ್ನ ಮೇಲೆ ಯುವತಿಗೆ ಕನಿಕರ ಹುಟ್ಟುವಂತೆ ಮಾತನಾಡಿಸುತ್ತಿದ್ದ. ಒಳ್ಳೆಯ ಯುವಕನಿರಬಹುದು ಎಂದು ಭಾವಿಸಿದ್ದ ಯುವತಿ ಆತನೊಂದಿಗೆ ಚಾಟ್ ಮಾಡುತ್ತಿದ್ದಳು. ಮಾತಿನಲ್ಲೇ ಯುವತಿಯನ್ನು ಬಲೆಗೆ ಬೀಳಿಸಲು ಯತ್ನಿಸಿದ್ದ ಆರೋಪಿ ಶ್ರವಣ್, ಆಕೆಯ ಮೊಬೈಲ್ ನಂಬರ್ ಪಡೆದು ವಾಟ್ಸ್ಅಪ್ನಲ್ಲಿ ಚಾಟ್ ಮಾಡಲು ಶುರು ಮಾಡಿದ್ದಾನೆ.
ಯುವತಿಯೊಂದಿಗೆ ಸಲುಗೆ ಬೆಳೆಯುತ್ತಿದ್ದಂತೆ ಅಶ್ಲೀಲವಾಗಿ ಮಾತನಾಡಲು ಆರಂಭಿಸಿದ್ದ. ಇದರಿಂದ ಆತಂಕಗೊಂಡ ಯುವತಿ ಶ್ರವಣ್ ನಂಬರ್‌ಅನ್ನು ಬ್ಲಾಕ್ ಮಾಡಿದ್ದಳು. ಪದೇ ಪದೇ ಯುವತಿಗೆ ಕರೆ ಮಾಡುತ್ತಿದ್ದ ಆರೋಪಿಯು ತನ್ನೊಂದಿಗೆ ಮಲಗುವಂತೆ ಅಶ್ಲೀಲವಾಗಿ ಮಾತನಾಡಲು ಶುರುಮಾಡಿದ್ದಾನೆ. ನಿನ್ನನ್ನು ಪ್ರೀತಿಸುತ್ತಿದ್ದೇನೆ, ನೀನು ನನ್ನ ಪ್ರೇಮ ನಿವೇದನೆ ತಿರಸ್ಕರಿಸಿದರೆ ಕೊಲೆ ಮಾಡುವುದಾಗಿ ಬೆದರಿಸಿದ್ದಾನೆ. ಇದರಿಂದ ಭಯಗೊಂಡ ಯುವತಿ, ಇನ್ನು ಮುಂದೆ ಕಿರುಕುಳ ನೀಡಿದರೆ ಈ ವಿಚಾರವನ್ನು ಮನೆಯವರಿಗೆ ತಿಳಿಸುವುದಾಗಿ ಎಚ್ಚರಿಕೆ ನೀಡಿದ್ದಳು.
ಇದನ್ನು ನಿರ್ಲಕ್ಷಿಸಿದ ಆರೋಪಿ, ಯಾರಿಗೆ ಹೇಳಿದರೂ ನಿನ್ನನ್ನು ಬಿಡುವುದಿಲ್ಲ. ಸಾಯಿಸುತ್ತೇನೆ. ನಾನು ಸಾಯಲು ಸಿದ್ದನಾಗಿದ್ದೇನೆ ಎಂದು ಬೆದರಿಸಿದ್ದಾನೆ. ಜ.29ರಂದು ಸಂಜೆ ಯುವತಿ ಕೆಲಸ ಮಾಡುತ್ತಿದ್ದ ಕ್ಲಿನಿಕ್‌ಗೆ ಬಂದ ಶ್ರವಣ್, ಆಕೆಯ ಮೊಬೈಲ್ ಕಸಿದುಕೊಳ್ಳಲು ಯತ್ನಿಸಿದ್ದ. ಮೊಬೈಲ್ ಕೊಡಲು ನಿರಾಕರಿಸಿದಾಗ ಯುವತಿಯ ಮೇಲೆ ಹಲ್ಲೆ ನಡೆಸಿ ಎಳೆದಾಡಿ ಕಿರುಕುಳ ನೀಡಿದ್ದ. ನೀನು ಪ್ರೀತಿಸದಿದ್ದರೆ ನಿನ್ನನ್ನು ಕೊಲೆ ಮಾಡಿ ನಾನೂ ಸಾಯುತ್ತೇನೆ ಎಂದು ಬೆದರಿಸಿ ಹೋಗಿದ್ದ. ಯುವತಿ ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಳು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಶ್ರವಣ್ ಕುಮಾರ್‌ನ್ನು ಬಂಧಿಸಿದ್ದಾರೆ.