ಬೆಂಗಳೂರು: ಹೊಟ್ಟೆಪಾಡಿಗಾಗಿ ಹಾಲಿನ ಅಂಗಡಿ ಇಟ್ಟುಕೊಂಡಿದ್ದ ವೃದ್ಧನಿಗೆ ಮಚ್ಚು ತೋರಿಸಿ ಬೆದರಿಸಿ ಹಣ ದೋಚಿರುವ ಘಟನೆ ನಗರದ ಕೆ.ಜಿ ಹಳ್ಳಿ ಬಳಿ ನಡೆದಿದೆ.
ಕೆ.ಜಿ. ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಂಗಡಿ ನಡೆಸುತ್ತಿದ್ದ ವೃದ್ಧ ಎಂದಿನಂತೆ ವ್ಯಾಪಾರದಲ್ಲಿ ನಿರತನಾಗಿದ್ದ. ಈ ವೇಳೆ ಡಿಯೋ ಬೈಕಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಏಕಾಏಕಿ ಅಂಗಡಿಗೆ ನುಗ್ಗಿ ಮಾರಕಾಸ್ತ್ರ ತೋರಿಸಿ ಹಣ ದೋಚಿಕೊಂಡು ಪರಾರಿಯಾಗಿದ್ದಾರೆ.
ಸಿಸಿಟಿವಿ ವಿಡಿಯೋದಲ್ಲೇನಿದೆ?
ಇಬ್ಬರ ಪೈಕಿ ಓರ್ವ ಹೆಲ್ಮೆಟ್ ಧರಿಸಿದ್ದು, ತಾತನಿಗೆ ಮಚ್ಚು ತೋರಿಸಿ ಬೆದರಿಸುತ್ತಾನೆ. ವೃದ್ಧ ನಿರಾಕರಿಸಿದಾಗ ಅಂಗಡಿಯಲ್ಲಿದ್ದ ಕ್ಯಾಶ್ ಬಾಕ್ಸ್ ಎಳೆದು ಹಣ ದೋಚಲು ಮುಂದಾಗುತ್ತಾನೆ . ಸಾಧ್ಯವಾಗದಿದ್ದಾಗ ಇನ್ನೊಬ್ಬನೂ ಬಂದು ವೃದ್ಧನಿಗೆ ಬೆದರಿಸುತ್ತಾನೆ. ಮಚ್ಚು ನೋಡಿ ಜೀವ ಭಯದಿಂದ ವೃದ್ಧ ಹಿಂದೆ ಸರಿದಾಗ ದುಷ್ಕರ್ಮಿಗಳು ಹಣ ತೆಗೆದುಕೊಂಡು ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ.
ಕೆ.ಜಿ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.