ಬೆಂಗಳೂರು: ರಾಜ್ಯ ಸರ್ಕಾರ ಮತ್ತೆ ಲಾಕ್ಡೌನ್ ಹೇರಲಿದ ಎಂಬ ಮಾಹಿತಿ ಮೇರೆಗೆ ನಗರ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ.ರಾವ್ ಲಾಕ್ಡೌನ್ ಬೇಡ, ಹೋಟೆಲ್ ಉದ್ಯಮ ಕಾರ್ಯನಿವಾಹಿಸಲು ಅವಕಾಶ ನೀಡಿ ಎಂದು ಸರ್ಕಾರಕ್ಕೆ ಮನವಿ ಮಾಡಿದರು.
ಈಗಾಗಲೇ 90 ದಿನದ ಲಾಕ್ಡೌನ್ ಇದ್ದಾಗ ಹಲವಾರು ಜನ ಕೆಲಸ ಕಳೆದುಕೊಂಡಿದ್ದು, ಹೋಟೆಲ್ ಉದ್ಯಮಕ್ಕೆ ಸಹಿಸಲಾರದ ಪೆಟ್ಟು ಬಿದ್ದಿದೆ. ಬಾಡಿಗೆ, ವಿದ್ಯುತ್ ದರ ಸೇರಿದಂತೆ ದಿನನಿತ್ಯದ ಖರ್ಚಿಗೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮತ್ತೆ ಲಾಕ್ಡೌನ್ ಹೇರಿದರೆ ಹೋಟೆಲ್ ಉದ್ಯಮ ನಶಿಸಿ ಹೋಗುತ್ತದೆ ಎಂದು ಆತಂಕ ಹೊರಹಾಕಿದರು.
ಸರ್ಕಾರ ಹೇಳುವ ಎಲ್ಲಾ ನಿಯಮಗಳನ್ನು ಉದ್ಯಮ ಪಾಲಿಸುತ್ತಿದೆ. ವ್ಯಕ್ತಿ ಅಂತರ, ಸ್ಯಾನಿಟೈಸರ್ ಕಾಪಾಡುವ ಜೊತೆಗೆ ಹೋಟೆಲ್ಗಳಲ್ಲಿ ಹೆಚ್ಚು ಸುಚಿತ್ವವನ್ನ ಕಾಪಾಡುತ್ತಿದ್ದೇವೆ ಎಂದು ಹೇಳಿದರು.
ಒಟ್ಟಾರೆಯಾಗಿ ಹೋಟೆಲ್ ಉದ್ಯಮ ಅಗತ್ಯ ಸೇವೆಗೆ ಸೇರುತ್ತದೆ, ಸಮಯಕ್ಕೆ ಸರಿಯಾದ ಆಹಾರ ಈ ಸಂದರ್ಭದಲ್ಲಿ ಅತ್ಯವಶ್ಯಕ ಆಗಿರುವ ಹಿನ್ನೆಲೆಯಲ್ಲಿ ಹೋಟೆಲ್ ಮುಚ್ಚುವ ನಿರ್ಧಾರ ಸರ್ಕಾರ ತೆಗೆದುಕೊಳ್ಳಬಾರದು ಎಂದು ಆಗ್ರಹಿಸಿದರು.