ಬೆಂಗಳೂರು: ರಾಜ್ಯದ ಕೆಲವು ಭಾಗಗಳಲ್ಲಿ ಕೊರೊನಾ ವೈರಸ್ ಇಲ್ಲದ ಅಥವಾ ಕಡಿಮೆ ಇರುವ ಜಿಲ್ಲೆಗಳನ್ನು ಸರ್ಕಾರ ಹಸಿರು ವಲಯಗಳನ್ನಾಗಿ ಗುರುತಿಸಿದೆ. ಅಂತಹ ವಲಯಗಳಲ್ಲಿ ಮೇ 4ರ ನಂತರ ಆಯಾ ಜಿಲ್ಲಾ ವ್ಯಾಪ್ತಿಗಳಲ್ಲಿ ಸಾರ್ವಜನಿಕರ ಪ್ರಯಾಣಕ್ಕಾಗಿ ಬಸ್ಗಳ ಓಡಾಟ ಪ್ರಾರಂಭಿಸಲು ಅವಕಾಶ ಕಲ್ಪಿಸಲಾಗಿದೆ.
ಇನ್ನು ಲಾಕ್ಡೌನ್ಅನ್ನೇ ಬಂಡವಾಳವನ್ನಾಗಿಸಿಕೊಂಡಿರುವ ಹಲವರು, ಪ್ರಯಾಣಿಕರಿಂದ ನಿಗದಿತ ಟಿಕೆಟ್ ದರಕ್ಕೆ ಬದಲಾಗಿ ಎರಡು ಅಥವಾ ಮೂರು ಪಟ್ಟು ಜಾಸ್ತಿ ವಸೂಲಿ ಮಾಡುತ್ತಿರುವುದಾಗಿ ದೂರುಗಳು ಬಂದಿವೆ. ಖಾಸಗಿ ಸಾರಿಗೆ ಸಂಸ್ಥೆ ಅಥವಾ ಖಾಸಗಿ ವಾಹನಗಳು ನಿಗದಿತ ದರಕ್ಕಿಂತ ಹೆಚ್ಚಿನ ದರ ವಿಧಿಸುವುದು ಕಾನೂನಿಗೆ ವಿರುದ್ಧವಾಗಿದೆ. ಈ ರೀತಿ ಅಧಿಕ ದರ ವಿಧಿಸಿದ ಬಗ್ಗೆ ದೂರುಗಳು ಬಂದಲ್ಲಿ ಅಂತಹ ವಾಹನಗಳ, ಟ್ರಾವೆಲ್ಸ್ ಸಂಸ್ಥೆಗಳ ಮಾಲೀಕರ ವಿರುದ್ಧ ಕ್ರಮ ಜರುಗಿಸಲಾಗುತ್ತದೆ ಎಂದು ಸಾರಿಗೆ ಇಲಾಖೆ ಎಚ್ಚರಿಸಿದೆ. ಕಾನೂನು ಉಲ್ಲಂಘನೆ ಮಾಡಿದರೆ ರಹದಾರಿಗಳನ್ನು ಅಮಾನತು ಮಾಡಲಾಗುವುದು ಎಂದು ಆದೇಶ ನೀಡಿದೆ.