ಬೆಂಗಳೂರು: ನಾನು ಶಾಸಕನಾಗಿ ಮತ್ತೆ ಆಯ್ಕೆಯಾಗಬೇಕೋ ಬೇಡವೋ ಎಂದು ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದ ಮತದಾರರು ನಿರ್ಧರಿಸಲಿದ್ದಾರೆ ಎಂದು ಅನರ್ಹ ಶಾಸಕ ಕೆ.ಗೋಪಾಲಯ್ಯ ದೇವೇಗೌಡರಿಗೆ ಪರೋಕ್ಷ ಟಾಂಗ್ ಕೊಟ್ಟರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಸ್ಥಾನದಿಂದ ಅನರ್ಹಗೊಳಿಸಿರುವ ಪ್ರಕರಣ ಕೋರ್ಟ್‌ನಲ್ಲಿದೆ. ನ್ಯಾಯಾಲಯದಲ್ಲಿ ನಮಗೆ ನ್ಯಾಯ ಸಿಗುವ ವಿಶ್ವಾಸ ಇದೆ ಎಂದ್ರು.
ನನಗೆ ಮತ ಹಾಕುವವರು ಕ್ಷೇತ್ರದ ಮತದಾರ ಪುಣ್ಯಾತ್ಮರು, ದೇವೇಗೌಡರು ನಮ್ಮ ಗುರುಗಳು, ಅವರು ಏನು ಹೇಳಿದರೂ ಸ್ವೀಕಾರ ಮಾಡುತ್ತೇನೆ, ಗೋಪಾಲಯ್ಯ ಬೇಕಾ ಬೇಡ್ವಾ ಅಂತಾ ಕ್ಷೇತ್ರದ ಜನ ತೀರ್ಮಾನ ಮಾಡ್ತಾರೆ. ನಾನು ಕ್ಷೇತ್ರದ ಜನರ ಮಧ್ಯೆಯೇ ಇದ್ದೇನೆ, ನಮ್ಮ ಗುರುಗಳ ವಿರುದ್ಧ ಗೆಲ್ಲುವ ವಿಶ್ವಾಸ ಇದೆ ಎಂದರು.
ಹೇಮಲತಾ ಗೋಪಾಲಯ್ಯ ಮೇಯರ್ ಸ್ಥಾನಕ್ಕೆ ಸ್ಫರ್ಧೆ ವಿಚಾರ ಸಂಬಂಧ ಮುಂದಿನ ದಿನಗಳಲ್ಲಿ ನಾವು ನಾಲ್ಕೈದು ಶಾಸಕರು ಕುಳಿತು ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದ್ರು.
ವಾಹನ ಸವಾರರಿಗೆ ದುಬಾರಿ ದಂಡ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಗೋಪಾಲಯ್ಯ, ಹೊಸ ನಿಯಮ ಸಮಾಜಕ್ಕೆ ಪೂರಕವಾಗಿದೆ. ಸಮಾಜ ಸುರಕ್ಷಿತವಾಗಿರಬೇಕಿದ್ದರೆ ನಿಯಮ ಅನುಷ್ಠಾನ ಆಗಬೇಕು. ಜನರನ್ನು ಸಮಸ್ಯೆಯಲ್ಲಿ ಸಿಲುಕಿಸಿ ದಂಡ ಸಂಗ್ರಹಿಸಬೇಕು ಎಂಬುದು ನಮ್ಮ ಉದ್ದೇಶ ಅಲ್ಲ ಎಂದು ನೂತನ ಸಂಚಾರ ನಿಯಮವನ್ನು ಸಮರ್ಥಿಸಿಕೊಂಡರು.