ಬೆಂಗಳೂರು: ಬೇವುಬೆಲ್ಲದ ಯುಗಾದಿ ಹಬ್ಬವನ್ನು ಸಂಭ್ರಮ ಸಡಗರದಿಂದ ಅದ್ದೂರಿಯಾಗಿ ಬರಮಾಡಿಕೊಂಡ ಸಿಟಿ ಮಂದಿ, ಇಂದು ಹೊಸತೊಡಕು ಆಚರಣೆ ಮಾಡಿದರು. ಬೆಳ್ಳಂಬೆಳಗ್ಗೆ ಮಾಂಸದಂಗಡಿಯ ಬಾಗಿಲ ಕದ ತಟ್ಟಿದರು. ಹೀಗಾಗಿ ಹನುಮಂತನ ಬಾಲದಂತೆ ಮಾಂಸದಂಗಡಿಯ ಮುಂದೆ ಜನರು ನಿಂತಿದ್ದ ದೃಶ್ಯ ಸಾಮಾನ್ಯವಾಗಿ ಕಂಡು ಬಂತು.
ಅದರಲ್ಲೂ ಬೆಂಗಳೂರಿನ ದೀಪಾಂಜಲಿ ನಗರದಲ್ಲಿರೋ ಫೇಮಸ್ ಪಾಪಣ್ಣ ಮಾಂಸದ ಅಂಗಡಿಯಲ್ಲಂತೂ ಜನರ ದಂಡೇ ನೆರೆದಿತ್ತು. ನಾ ಮುಂದು, ತಾ ಮುಂದು ಅಂತ ಜನರು ಕೈಯಲ್ಲಿ ಬ್ಯಾಗ್ ಹಿಡಿದುಕೊಂಡು ಖರೀದಿಗಾಗಿ ಸರತಿ ಸಾಲಿನಲ್ಲಿ ನಿಂತಿದ್ದರು. ಹಾಗಾಗಿ ಯುಗಾದಿ ಹಬ್ಬದ ಸಂಭ್ರಮ ಕೇವಲ ನಿನ್ನೆಗೆ ಸೀಮಿತವಾಗದೆ ಇವತ್ತೂ ಕೂಡ ಮುಂದುವರೆದಿತ್ತು. ವಿಕೆಂಡ್ನಲ್ಲೇ ಹಬ್ಬ ಬಂದ ಕಾರಣ ಜನರು ಕೆಲಸದೊತ್ತಡದಿಂದ ಹೊರ ಬಂದು ಅದ್ದೂರಿಯಾಗಿ ಹಬ್ಬ ಆಚರಣೆ ಮಾಡಿದರು.
ನಿನ್ನೆ ಬಿಸಿ ಬಿಸಿ ತುಪ್ಪದೊಂದಿಗೆ ಹೋಳಿಗೆ ಜೊತೆಗೆ ಸಿಹಿ ತಿಂಡಿ ಚಪ್ಪರಿಸಿದ ಮಂದಿ, ಇಂದು ರುಚಿಕಟ್ಟಾದ ಮಾಂಸದೂಟ ಸವಿದರು. ಬಹುತೇಕ ಎಲ್ಲ ಮಾಂಸದ ಅಂಗಡಿಗಳಲ್ಲೂ ಜನರು ಖರೀದಿ ಭರಾಟೆಯಲ್ಲಿ ಬ್ಯುಸಿಯಾಗಿದ್ದ ದೃಶ್ಯ ಕಂಡು ಬಂತು. ಕುರಿ ಮಾಂಸ ಪ್ರತಿ ಕೆ.ಜಿ ಗೆ 500-540 ರೂಪಾಯಿಯಲ್ಲಿ ಮಾರಾಟ ಆಗುತ್ತಿತ್ತು. ರೆಡಿಮೇಡ್ ಕೋಳಿ ಮಾಂಸಕ್ಕೆ ಕೆ.ಜಿಗೆ 180-200 ಇದ್ದರೆ, ಹಂದಿ ಮಾಂಸ ಕೆ.ಜಿ 200-250 ರೂಪಾಯಿವರೆಗೂ ಮಾರಾಟವಾಗುತ್ತಿದೆ.
ಹಬ್ಬದ ಸಡಗರದಲ್ಲಿರುವ ಮಂದಿ ಯುಗಾದಿಯ ಮೊದಲ ದಿನ ಸಿಹಿಯ ಮಿಶ್ರಣ ಸವಿದರೆ, ಇವತ್ತು ಮಾಂಸಾಹಾರದ ಖಾರದ ರುಚಿಕರ ತಿಂಡಿಗಳನ್ನು ಚಪ್ಪರಿಸಿದರು. ವೀಕೆಂಡ್ ಮೋಜಿಗೆ ಹೊಸ ತೊಡಕು ಸಾಕ್ಷಿಯಾಯಿತು.