ಬೆಂಗಳೂರು: ಲಸಿಕಾ ಅಭಿಯಾನದಲ್ಲಿ ತಾನೇ ಲಸಿಕೆ ನೀಡಿರುವಂತೆ ಫೋಟೋ ತೆಗೆದು ಸಾಮಾಜಿಕ ತಾಣಗಳಲ್ಲಿ ಹರಿಬಿಟ್ಟಿರುವ ಪಾಲಿಕೆಯ ಮಾಜಿ ಸದಸ್ಯ ಶ್ರೀಕಾಂತ್ ವಿರುದ್ಧ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಕೆಆರ್ ಪುರಂನ ಲಿಟ್ಲ್ ಬ್ಲೂಮ್ ಶಾಲೆಯಲ್ಲಿ ಆಯೋಜಿಸಿದ್ದ ಕೊರೊನಾ ಲಸಿಕಾ ಅಭಿಯಾನದಲ್ಲಿ ದೇವಸಂದ್ರ ವಾರ್ಡ್ನ ಸಾರ್ವಜನಿಕರಿಗೆ ಲಸಿಕೆ ನೀಡಲಾಗುತ್ತಿತ್ತು. ಅಭಿಯಾನಕ್ಕೆ ಚಾಲನೆ ನೀಡಿದ್ದ ಪಾಲಿಕೆ ಮಾಜಿ ಸದಸ್ಯ ಎಂ.ಎನ್.ಶ್ರೀಕಾಂತ್ ತಾನೇ ಲಸಿಕೆ ನೀಡುತ್ತಿರುವಂತೆ ಪೋಸ್ ಕೊಟ್ಟು ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ಫೋಟೋಗಳನ್ನು ನೋಡಿದ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜನರ ಜೀವದ ಜೊತೆ ಆಟ ಆಡುವ ಅಧಿಕಾರವನ್ನು ಇವರಿಗೆ ಯಾರು ಕೊಟ್ಟರು. ಇಂತಹ ಕ್ಲಿಷ್ಟ ಸಂದರ್ಭದಲ್ಲಿ ಪ್ರಚಾರದ ಗೀಳಿಗಾಗಿ ಬಿದ್ದಿರುವುದು ಹೇಯಕರ ಎಂದು ಕಾಂಗ್ರೆಸ್ ಮುಖಂಡ ಡಿ.ಎ.ಗೋಪಾಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇವಸಂದ್ರ ವಾರ್ಡ್ನಲ್ಲಿ ಪಾಲಿಕೆ ಮಾಜಿ ಸದಸ್ಯರ ಬೆಂಬಲಿಗರು, ಅವರಿಗೆ ಬೇಕಾದವರಿಗೆ, ಪಕ್ಷದ ಕಾರ್ಯಕರ್ತರಿಗೆ ಲಸಿಕೆ ಸುಲಭವಾಗಿ ಸಿಗುತ್ತಿದೆ. ಆದರೆ ಸಾಮಾನ್ಯ ಜನರು ಮೂರು ದಿನ ಸರತಿ ಸಾಲಿನಲ್ಲಿ ನಿಂತರೂ ಲಸಿಕೆ ಸಿಗುತ್ತಿಲ್ಲ ಎಂದು ಕೆಪಿಸಿಸಿ ನಗರ ಸಾಮಾಜಿಕ ಜಾಲತಾಣದ ಕಾರ್ಯದರ್ಶಿ ಗಗನ್ ಯಾದವ್ ಆರೋಪಿಸಿದ್ದಾರೆ.
ವೈದ್ಯರು ಮಾಡುವಂತಹ ಕೆಲಸವನ್ನು ತಾನೇ ಮಾಡುತ್ತಿದ್ದೇನೆಂದು ಪ್ರಚಾರದ ಗೀಳಿಗೆ ಪೋಸ್ ಕೊಡುತ್ತಿರುವುದು ಮಾತ್ರ ದುರದೃಷ್ಟಕರ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.