ಬೆಂಗಳೂರು : ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಧಮ್ಮು, ತಾಕತ್ತಿಗೆ ಜನರು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಉತ್ತರ ನೀಡಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿರುಗೇಟು ಕೊಟ್ಟರು. ವಿಧಾನಸೌಧದಲ್ಲಿ ಇಂದು ಮಾತನಾಡಿದ ಅವರು, ಧಮ್ಮು, ತಾಕತ್ತಿದ್ದರೆ ಕಾಂಗ್ರೆಸ್ ಸರ್ಕಾರ 15 ಕೆ.ಜಿ ಅಕ್ಕಿ ಕೊಡಲಿ ಎಂಬ ಬೊಮ್ಮಾಯಿ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ, ಬೊಮ್ಮಾಯಿ ಧಮ್ಮು ತಾಕತ್ತಿಗೆ ಜನರು ಈಗಾಗಲೇ ಉತ್ತರ ಕೊಟ್ಟಿದ್ದಾರೆ. ನಾವು ರಾಜ್ಯದ ಜನರಿಗೆ ಐದು ಗ್ಯಾರಂಟಿ ನೀಡಿದ್ದು, ಅದರಲ್ಲಿ ಅನ್ನಭಾಗ್ಯ ಯೋಜನೆ ಮೂಲಕ 10 ಕೆ.ಜಿ ಅಕ್ಕಿ ನೀಡುವುದಾಗಿ ವಾಗ್ದಾನ ನೀಡಿದ್ದೇವೆ ಎಂದರು.
ಹೆಚ್ಚುವರಿ 5 ಕೆ.ಜಿ ಅಕ್ಕಿ ಖರೀದಿಗೆ ಭಾರತೀಯ ಆಹಾರ ನಿಗಮ ಆರಂಭದಲ್ಲಿ ಒಪ್ಪಿಗೆ ನೀಡಿತ್ತು. ಆದರೆ ರಾಜಕೀಯ ಉದ್ದೇಶದಿಂದ ರಾಜ್ಯದ ಯೋಜನೆ ವಿಫಲಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಬಿಜೆಪಿಯ ಕೇಂದ್ರ ಸರ್ಕಾರ ರಾಜ್ಯಕ್ಕೆ ಮೋಸ ಮಾಡಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರದಿದ್ದರೆ ಕೇಂದ್ರದ ಯೋಜನೆ ಕಟ್ ಮಾಡುತ್ತೇವೆ ಎಂದು ನಡ್ದಾ ಹೇಳಿದ್ದರು. ಈಗ ಅವರು ಹೇಳಿದಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ದೂರಿದರು.
ಕೇಂದ್ರ ಸರ್ಕಾರ ಅಕ್ಕಿ ನೀಡದಿದ್ದರೂ ನಾವು ಬೇರೆ ರಾಜ್ಯಗಳೊಂದಿಗೆ ಮಾತನಾಡಿ ಅಲ್ಲಿಂದ ಅಕ್ಕಿ ಖರೀದಿ ಮಾಡುತ್ತೇವೆ. ಸ್ವಲ್ಪ ತಡವಾದರೂ ನಮ್ಮ ಯೋಜನೆ ಜಾರಿ ಮಾಡಿಯೇ ಮಾಡುತ್ತೇವೆ. ನಾವು ಈ ಯೋಜನೆಯಲ್ಲಿ ಕೇವಲ ಒಂದು ಪಕ್ಷದವರಿಗೆ ಮಾತ್ರ ಅಕ್ಕಿ ನೀಡುತ್ತಿಲ್ಲ. ಸರ್ವರಿಗೂ ಸಮಬಾಳು ಸಮಪಾಲು ಎಂಬಂತೆ ಪಕ್ಷ, ಧರ್ಮ ಭೇದವಿಲ್ಲದೆ ನೀಡುತ್ತಿದ್ದೇವೆ. ಒಂದು ವೇಳೆ ಕೇಂದ್ರ ಸರ್ಕಾರ ಸಹಕಾರ ನೀಡಿದ್ದರೆ ಜನರ ಹೊಟ್ಟೆ ತುಂಬುತ್ತಿತ್ತು. ಅಕ್ಕಿ ನೀಡುವುದು ನಮ್ಮ ಜವಾಬ್ದಾರಿ. ಪಾರದರ್ಶಕವಾಗಿ ಅಕ್ಕಿ ಖರೀದಿ ಮಾಡಿ ಜನರಿಗೆ ನೀಡುತ್ತೇವೆ ಎಂದು ಸಚಿವರು ಸ್ಪಷ್ಟಪಡಿಸಿದರು.
ಅಕ್ಕಿ ಕೊಡದಿದ್ದಾರೆ ಪ್ರತಿಭಟನೆ- ಬೊಮ್ಮಾಯಿ ಎಚ್ಚರಿಕೆ: ಇಂದು ನಗರದ ಮೌರ್ಯ ವೃತ್ತದಲ್ಲಿ ಬಸವರಾಜ ಬೊಮ್ಮಾಯಿ ಸೇರಿದಂತೆ ಬಿಜೆಪಿ ನಾಯಕರು ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು. ಪೊಲೀಸರಿಂದ ಬಿಡುಗಡೆಗೊಂಡ ಬಳಿಕ ಹೈಗ್ರೌಂಡ್ಸ್ ಠಾಣೆಯ ಆವರಣದಲ್ಲೇ ಸುದ್ದಿಗೋಷ್ಠಿ ನಡೆಸಿದ ಬೊಮ್ಮಾಯಿ, ಕೇಂದ್ರ ಸರ್ಕಾರದ 5 ಕೆ.ಜಿ ಅಕ್ಕಿ ಜೊತೆಗೆ ನೀವು ನೀಡಿದ್ದ ಗ್ಯಾರಂಟಿ ಭರವಸೆಯಂತೆ ಒಟ್ಟು 15 ಕೆ.ಜಿ ಅಕ್ಕಿ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ಮಾಡಲು ಹೊರಟ ನಮ್ಮನ್ನು ವಶಕ್ಕೆ ಪಡೆದು ಹೋರಾಟ ದಮನ ಮಾಡುತ್ತಿದ್ದಾರೆ. ಪೊಲೀಸ್ ರಾಜ್ಯ ಮಾಡಲು ಹೊರಟಿದ್ದೀರಾ?. ನಿಮ್ಮ ಪೊಲೀಸ್ ರಾಜ್ಯ ಎಷ್ಟು ದಿನ ಇರುತ್ತದೆ ನೋಡೋಣ. ಪೊಲೀಸ್ ಬಲವೋ, ನಮ್ಮ ರಟ್ಟೆಯ ಬಲವೋ ನೋಡೋಣ ಎಂದು ಬೊಮ್ಮಾಯಿ ಸವಾಲು ಹಾಕಿದರು. ಅಕ್ಕಿ ಸೇರಿದಂತೆ ಗ್ಯಾರಂಟಿಗಳ ಗೊಂದಲ, ಸರ್ಕಾರದ ವೈಫಲ್ಯದ ವಿರುದ್ಧ ಸದನದ ಒಳಗೆ, ಹೊರಗೆ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಇದನ್ನೂ ಓದಿ : 15 ಕೆ.ಜಿ ಅಕ್ಕಿ ನೀಡದಿದ್ದರೆ ಸದನದ ಒಳಗೆ ಹೊರಗೆ ಹೋರಾಟ: ಮಾಜಿ ಸಿಎಂ ಬೊಮ್ಮಾಯಿ