ಬೆಂಗಳೂರು: ತೌಕ್ತೆ ಚಂಡಮಾರುತ ರಾಜ್ಯದ ಕರಾವಳಿ ಭಾಗದಲ್ಲಿ ರೌದ್ರವತಾರ ತೋರಿದ್ದು, ಇದರ ಆರ್ಭಟಕ್ಕೆ ಒಟ್ಟು 8 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಇತ್ತೀಚಿನ ಪ್ರಾಥಮಿಕ ವರದಿ ಪ್ರಕಾರ ಈವರೆಗೆ ಚಂಡಮಾರುತದ ಅಬ್ಬರಕ್ಕೆ ಒಟ್ಟು 8 ಮಂದಿ ಬಲಿಯಾಗಿದ್ದಾರೆ. ರಾಜ್ಯದ ಏಳು ಜಿಲ್ಲೆಗಳಾದ ದ.ಕನ್ನಡ, ಉಡುಪಿ, ಉತ್ತರ ಕನ್ನಡ, ಹಾಸನ, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಬೆಳಗಾವಿಯಲ್ಲಿ ತೌಕ್ತೆ ಚಂಡಮಾರುತದ ತೀವ್ರತೆ ಹೆಚ್ಚಾಗಿತ್ತು. ಒಟ್ಟು 121 ಗ್ರಾಮಗಳು ಚಂಡಮಾರುತದ ಆರ್ಭಟಕ್ಕೊಳಗಾಗಿದೆ. ಚಂಡಮಾರುತದ ಅಬ್ಬರಕ್ಕೆ ದ.ಕನ್ನಡ 2, ಬೆಳಗಾವಿಯಲ್ಲಿ 2, ಉಡುಪಿ, ಚಿಕ್ಕಮಗಳೂರು, ಉತ್ತರ ಕನ್ನಡ ಮತ್ತು ಶಿವಮೊಗ್ಗದಲ್ಲಿ ತಲಾ ಒಬ್ಬರಂತೆ 8 ಮಂದಿ ಸಾವನ್ನಪ್ಪಿದ್ದಾರೆ.
ಒಟ್ಟು 57 ಮನೆಗಳು ಸಂಪೂರ್ಣ ಹಾನಿಗೊಳಗಾದರೆ, 330 ಮನೆಗಳು ಭಾಗಶಃ ಹಾನಿಗೊಳಗಾಗಿವೆ. ಚಂಡಮಾರುತದ ಹೊಡೆತಕ್ಕೆ 32.87 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ ಸಂಭವಿಸಿದೆ. ಒಟ್ಟು 116 ಬೋಟುಗಳು, 57 ನೆಟ್ಗಳು ಹಾನಿಯಾಗಿರುವ ವರದಿಯಾಗಿದೆ. 56.2 ಕಿ.ಮೀ. ರಸ್ತೆಗಳು ಚಂಡಮಾರುತಕ್ಕೆ ಹಾನಿಯಾಗಿವೆ.
ಒಟ್ಟು 547 ಮಂದಿಯನ್ನು ರಕ್ಷಿಸಲಾಗಿದೆ. ದ.ಕನ್ನಡ 380, ಉಡುಪಿ 60, ಉತ್ತರ ಕನ್ನಡ 76 ಜನರನ್ನು ರಕ್ಷಿಸಲಾಗಿದೆ. ಒಟ್ಟು 10 ಪರಿಹಾರ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, 290 ಮಂದಿ ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ. ಸುಮಾರು 711 ವಿದ್ಯುತ್ ಕಂಬಗಳು ಹಾನಿಗೊಳಗಾಗಿದ್ದರೆ, 153 ಟ್ರಾನ್ಸ್ಫಾರ್ಮರ್ ಹಾನಿಗೊಳಗಾಗಿವೆ.