ಬೆಂಗಳೂರು: ದೀಪಾವಳಿ ಹಬ್ಬದ ಹಿನ್ನೆಲೆ ಈ ಬಾರಿ ಕೇವಲ ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡಲು ಸರ್ಕಾರ ಅನುಮತಿ ನೀಡಿದೆ. ಹಸಿರು ಪಟಾಕಿ ಮಾರಾಟ ಮಳಿಗೆಗಳು ಸಹ ಆರಂಭವಾಗಿವೆ. ಆದರೆ ಪಟಾಕಿ ಖರೀದಿಸಬೇಕಿದ್ದ ಗ್ರಾಹಕರು ಮಾತ್ರ ಪಟಾಕಿ ಖರೀದಿಗೆ ಮನಸ್ಸು ಮಾಡುತ್ತಿಲ್ಲ. ಹಾಗಾಗಿ ಪಟಾಕಿ ಮಾರಾಟಗಾರರು ಗ್ರಾಹಕರ ನಿರೀಕ್ಷೆಯಲ್ಲಿದ್ದಾರೆ.
ದೀಪಾವಳಿ ಹಬ್ಬದ ಪ್ರಯುಕ್ತ ರಾಜ್ಯ ಸರ್ಕಾರ ಹಸಿರು ಪಟಾಕಿ ಮಾರಾಟಕ್ಕೆ ಹಲವು ಷರತ್ತುಗಳೊಂದಿಗೆ ಗ್ರೀನ್ ಸಿಗ್ನಲ್ ನೀಡಿದೆ. ಆದರೆ ಗ್ರಾಹಕರು ನಿರೀಕ್ಷೆಯಷ್ಟು ಬಾರದೇ ಇರುವುದರಿಂದ ಮಾರಾಟಗಾರರು ಕಂಗಾಲಾಗಿದ್ದಾರೆ.
ಬೆಂಗಳೂರು ಹೊರವಲಯದ ಮಹದೇವಪುರ, ಕೆಆರ್ಪುರ, ರಾಮಮೂರ್ತಿನಗರ, ಹೊರಮಾವು, ಮಾರತಹಳ್ಳಿ, ವೈಟ್ ಫೀಲ್ಡ್, ಹೊಸಕೋಟೆ ಸೇರಿದಂತೆ ಹಲವು ಕಡೆ ಹಸಿರು ಪಟಾಕಿ ಮಾರಾಟ ಮಳಿಗೆಗಳನ್ನು ತೆರೆದಿದ್ದಾರೆ. ಲಕ್ಷಾಂತರ ರೂಪಾಯಿ ಮೌಲ್ಯದ ಬಣ್ಣ ಬಣ್ಣದ ಹಸಿರು ಪಟಾಕಿಗಳನ್ನು ಮಳಿಗೆಗಳಲ್ಲಿ ಮಾರಾಟಕ್ಕಿಟ್ಟಿದ್ದಾರೆ. ಆದರೆ ಪಟಾಕಿ ಖರೀದಿಸಲು ಗ್ರಾಹಕರು ಮಾತ್ರ ಮುಂದಾಗುತ್ತಿಲ್ಲ.
ಈ ಬಾರಿಯ ದೀಪಾವಳಿ ಹಬ್ಬ ಆಚರಣೆ ವೇಳೆ ಪಟಾಕಿ ಬಳಸಬೇಕೋ ಬೇಡವೋ, ಹಸಿರು ಪಟಾಕಿ ಮಳಿಗೆಗಳಲ್ಲಿ ದೊರೆಯುತ್ತದೆಯೋ ಇಲ್ಲವೋ ಹೀಗೆ ಜನ ಪಟಾಕಿ ವಿಚಾರದಲ್ಲಿ ಗೊಂದಲದಲ್ಲಿದ್ದಾರೆ. ಹಾಗಾಗಿ ಪಟಾಕಿ ಖರೀದಿಸಲು ಗ್ರಾಹಕರು ಬರುತ್ತಿಲ್ಲ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ವ್ಯಾಪಾರ ಹೇಳಿಕೊಳ್ಳುವಂತಿಲ್ಲ. ಹಾಕಿರುವ ಬಂಡವಾಳ ಮರಳಿ ಬರುವುದು ಕಷ್ಟ ಇದೆ ಎಂದು ಪಟಾಕಿ ಮಾರಾಟಗಾರರು ಹೇಳುತ್ತಾರೆ.
ಮೈಸೂರಲ್ಲೂ ಪಟಾಕಿ ವ್ಯಾಪಾರ ಡಲ್
ಕೊರೊನಾ ಆರ್ಭಟ ಕಡಿಮೆಯಾಗುತ್ತಿರುವುದರಿಂದ ಪಟಾಕಿ ವ್ಯಾಪಾರಕ್ಕೆ ಒಳ್ಳೆಯ ಆರಂಭ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದ ವ್ಯಾಪಾರಿಗಳಿಗತೆ ನಿರಾಸೆ ಉಂಟಾಗಿದೆ.
ಮೈಸೂರಿನ ಜೆ.ಕೆ.ಮೈದಾನ, ಅಶೋಕಪುರಂ ವೃತ್ತ ಸೇರಿದಂತೆ ಅನೇಕ ಕಡೆ ಪಟಾಕಿ ಮಳಿಗೆಗಳು ತೆರೆದು ಭರ್ಜರಿ ವ್ಯಾಪಾರ ಮಾಡುತ್ತಿದ್ದರು. ಹಸಿರು ಪಟಾಕಿಗೆ ಮಾತ್ರ ಅವಕಾಶ ನೀಡಿದ್ದು, ವ್ಯಾಪಾರಿಗಳಲ್ಲಿ ಗೊಂದಲ ಉಂಟಾಗಿದೆ. ಹೀಗಾಗಿ ಹಾಕಿದ ಬಂಡವಾಳ ಬಂದರೆ ಸಾಕು ಎಂಬ ಪರಿಸ್ಥಿತಿಗೆ ವ್ಯಾಪಾರಸ್ಥರು ತಲುಪಿದ್ದಾರೆ.
ಜೆ.ಕೆ.ಮೈದಾನದಲ್ಲಿ 100ಕ್ಕೂ ಹೆಚ್ಚು ಮಳಿಗೆಗಳು ತೆರೆಯುತ್ತಿದ್ದವು. ಆದರೆ ಈ ಬಾರಿ 20 ಮಳಿಗೆಗಳು ಮಾತ್ರ ಇವೆ. 5-6 ಲಕ್ಷ ಬಂಡವಾಳ ಹೂಡಿ ಪಟಾಕಿ ವ್ಯಾಪಾರ ಮಾಡಲು ಕಾಯುತ್ತಿರುವವರಿಗೆ ನಷ್ಟ ಉಂಟಾಗುತ್ತಿದೆ. ಗ್ರಾಹಕರು ಕೂಡ ಪಟಾಕಿ ಕೊಳ್ಳಲು ಮುಂದೆ ಬಾರದೇ ಇರುವುದರಿಂದ ಮತ್ತಷ್ಟು ಚಿಂತೆ ಹೆಚ್ಚುವಂತೆ ಮಾಡಿದೆ.