ಬೆಂಗಳೂರು: ಕೋವಿಡ್ ನಿಯಂತ್ರಣಕ್ಕೆ ಲಾಕ್ಡೌನ್(Karnataka Lockdown) ಜಾರಿಯಾದ ಬಳಿಕ ರಾಜ್ಯ ರಾಜಧಾನಿಯಲ್ಲೀಗ ಕೊರೊನಾ ಪಾಸಿಟಿವಿಟಿ ರೇಟ್ ಶೇ.5ಕ್ಕಿಂತ ಕಡಿಮೆಯಾಗಿದೆ. ಲಾಕ್ಡೌನ್ನಿಂದಾಗಿ ತಮ್ಮೂರುಗಳಿಗೆ ತೆರಳಿದ ಜನರೀಗ ಬೆಂಗಳೂರಿಗೆ ಮರಳಿ ಬರುತ್ತಿದ್ದಾರೆ. ಇದರಿಂದ ದಾಸರಹಳ್ಳಿ ಸರ್ಕಲ್ ಸೇರಿದಂತೆ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಕೊರೊನಾ ಎರಡನೇ ಅಲೆ ನಿಯಂತ್ರಣಕ್ಕಾಗಿ ರಾಜ್ಯದಲ್ಲಿ ಲಾಕ್ಡೌನ್ ಜಾರಿ ಮಾಡಲಾಗಿದೆ. ಕೆಲಸವಿಲ್ಲದ ಪರಿಣಾಮ ಕೈಯಲ್ಲಿ ಕಾಸಿಲ್ಲದೆ ಬೆಂಗಳೂರು ಮಹಾನಗರದಲ್ಲಿ ಜೀವನ ಮಾಡೋದು ಕಷ್ಟ ಎಂದು ಕಾರ್ಮಿಕರು, ವ್ಯಾಪಾರಿಗಳು ತಮ್ಮ ಊರುಗಳಿಗೆ ತೆರಳಿದ್ದರು. ಲಾಕ್ಡೌನ್ ಜಾರಿಯಾದ ಬಳಿಕ ಇದೀಗ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆ ದಾಖಲಾಗಿದೆ. ನಗರದಲ್ಲಿ ಪಾಸಿಟಿವಿಟಿ ರೇಟ್ ಶೇ.5ಕ್ಕಿಂತ ಕಡಿಮೆ ಇದ್ದು, ಸರ್ಕಾರ ಹಂತಹಂತವಾಗಿ ಅನ್ಲಾಕ್(Unlock) ಘೋಷಣೆ ಮಾಡುವ ಸಾಧ್ಯತೆಯಿದೆ. ಗಾರ್ಮೆಂಟ್ಸ್ ಫ್ಯಾಕ್ಟರಿ, ಕೈಗಾರಿಕೆಗಳಿಗೆ ಅವಕಾಶ ನೀಡುವ ಸಾಧ್ಯತೆಯೂ ಇದ್ದು, ಬೆಂಗಳೂರು ತೊರೆದಿದ್ದ ಕಾರ್ಮಿಕರೀಗ ಕುಟುಂಬ ಸಮೇತರಾಗಿ ಹಿಂತಿರುಗುತ್ತಿದ್ದಾರೆ.
ಇದರಿಂದ ರಾಷ್ಟ್ರೀಯ ಹೆದ್ದಾರಿ 4ರ ನೆಲಮಂಗಲ ಬಳಿಯ ನವಯುಗ ಟೋಲ್, ದಾಸರಹಳ್ಳಿ ಸರ್ಕಲ್, ಗೊರಗುಂಟೆ ಪಾಳ್ಯದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ಮಧ್ಯ ಕರ್ನಾಟಕದ ದಾವಣಗೆರೆ, ಚಿತ್ರದುರ್ಗ ಉತ್ತರ ಕರ್ನಾಟಕದ ಹುಬ್ಬಳ್ಳಿ-ಧಾರವಾಡ, ಬಾಗಲಕೋಟೆ, ಕರಾವಳಿಯ ಮಂಗಳೂರು, ಉತ್ತರಕನ್ನಡ ಸೇರಿದಂತೆ ಹಾಸನ, ತುಮಕೂರು ಕಡೆಯಿಂದಲೂ ಜನರು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ತಮ್ಮ ಲಗೇಜ್ಗಳನ್ನು ವಾಹನಗಳ ಮೇಲೆ ಕಟ್ಟಿಕೊಂಡು ಧಾವಿಸುತ್ತಿರುವ ದೃಶ್ಯ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಸಾಮಾನ್ಯವಾಗಿದೆ.
ಇದನ್ನೂ ಓದಿ: ಎಲ್ಲರೂ ಲಸಿಕೆ ಪಡೆಯುವ ಮೂಲಕ ಮಾದರಿಯಾದ ಬೀದರ್‌ನ ಎರಡು ಗ್ರಾಮಸ್ಥರು