ಬೆಂಗಳೂರು: ಚೈತನ್ಯದ ಚಿಲುಮೆಯಾಗಿದ್ದ ಪೇಜಾವರ ಶ್ರೀಗಳು, ಅನಾರೋಗ್ಯದ ನಡುವೆಯೂ ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ಬೆಂಗಳೂರಿಗೆ ಆಗಮಿಸಿದ್ದರು.
ನಗರದ ಮೌರ್ಯ ಸರ್ಕಲ್ ಬಳಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡಲು ಸರೋಜಿನಿ ಮಹಿಷಿ ವರದಿ ಜಾರಿಗೆ ತರಬೇಕು ಎಂದು ಒತ್ತಾಯಿಸಿ ನಡೆದಿದ್ದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಲಾಗಿತ್ತು. ಡಿಸೆಂಬರ್ 7 ರಂದು 42ನೇ ದಿನಕ್ಕೆ ಮುಷ್ಕರ ಕಾಲಿಟ್ಟಾಗ ಅದಕ್ಕೆ ಬೆಂಬಲವಾಗಿ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
ಈ ಸಂದರ್ಭದಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಆದ್ಯತೆ ಕೊಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದ್ದರು. ಈ ವರದಿ ಜಾರಿಗೆ ಏನು ಅಡೆತಡೆ ಇದೆ ಎಂಬುದನ್ನ ಸರ್ಕಾರದೊಂದಿಗೆ ಚರ್ಚಿಸಲಾಗುವುದು ಎಂಬ ಭರವಸೆಯ ಮಾತುಗಳನ್ನಾಡಿದ್ದರು.
ಅಂದು ಎಷ್ಟೇ ಆರೋಗ್ಯದ ಸಮಸ್ಯೆ ಕಾಡಿದರೂ ಸಮಾಜದ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುತ್ತಿದ್ದರು ಎಂಬುದಕ್ಕೆ ಇದೊಂದು ನಿದರ್ಶನವಷ್ಟೇ. ಆದರೆ ಅಂತಹ ಸಮಾಜಮುಖಿ ಶ್ರೀಗಳು ಇನ್ನಿಲ್ಲ ಎನ್ನುವುದೇ ಬೇಸರದ ಸಂಗತಿ.