ಬೆಂಗಳೂರು: ತುಮಕೂರು ರಾಷ್ಟ್ರೀಯ ಹೆದ್ದಾರಿಯ ಸಂಪರ್ಕಿಸುವ ಪೀಣ್ಯ ಮೇಲ್ಸೇತುವೆಯಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆ ಭಾರಿ ಗಾತ್ರದ ವಾಹನಗಳ ಸಂಚಾರವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ನಿಷೇಧಿಸಿತ್ತು. ಇದೀಗ ಮೇಲ್ಸೇತುವೆ ದುರಸ್ತಿ ಕಾರ್ಯ ಮುಕ್ತಾಯವಾಗಿದ್ದು, ಪರೀಕ್ಷಾರ್ಥ ದೃಷ್ಟಿಯಿಂದ ಜ.16ರ ರಾತ್ರಿ 11 ಗಂಟೆಯಿಂದ ಜ.19ರ ಬೆಳಗ್ಗೆ 11 ಗಂಟೆವರೆಗೆ ಎಲ್ಲಾ ರೀತಿಯ ವಾಹನ ಸಂಚಾರ ನಿಷೇಧಿಸಲಾಗಿದೆ.
ಪೀಣ್ಯ ಎಲಿವೇಟೆಡ್ ಹೈವೆಯಲ್ಲಿ ಅಳವಡಿಸಲಾಗಿದ್ದ ವಯಾಡಕ್ಟ್ನಲ್ಲಿ ದೋಷ ಕಂಡು ಬಂದಿದ್ದರಿಂದ ಪೀಣ್ಯ ಮೇಲ್ಸೇತುವೆಯಲ್ಲಿ ಲಘು ಗಾತ್ರದ ವಾಹನ ಹೊರತುಪಡಿಸಿ ಭಾರಿ ಗಾತ್ರದ ವಾಹನಗಳನ್ನ ನಿಷೇಧಿಸಲಾಗಿತ್ತು. ಕಳೆದ ಒಂದು ವರ್ಷಗಳಿಂದ ದುರಸ್ತಿ ಕಾರ್ಯ ನಡೆಯುತಿತ್ತು. ಭಾರತೀಯ ವಿಜ್ಞಾನ ಸಂಸ್ಥೆ (ಐಎಎಸ್ಸಿ) ನೀಡಿದ ಸಲಹೆ ಮೇರೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಕಾಮಗಾರಿ ನಡೆಸುತ್ತಿತ್ತು. ಸದ್ಯ ಕಾಮಗಾರಿ ಪೂರ್ಣಗೊಂಡಿದ್ದು, ಮೇಲ್ಸೇತುವೆಯ ಪರೀಕ್ಷಾರ್ಥವಾಗಿ ಮೂರು ದಿನಗಳ ಕಾಲ ಎಲ್ಲಾ ರೀತಿಯ ವಾಹನಗಳ ಸಂಚಾರ ನಿಷೇಧಿಸಲಾಗಿದ್ದು, ವಾಹನ ಸವಾರರು ಪರ್ಯಾಯ ಮಾರ್ಗ ಬಳಸುವಂತೆ ಸಂಚಾರ ಪೊಲೀಸರು ಕೋರಿದ್ದಾರೆ.
ನಿಷೇಧಿಸಲಾದ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ: ನೆಲಮಂಗಲ ಕಡೆಯಿಂದ ಬೆಂಗಳೂರು ನಗರಕ್ಕೆ ಫ್ಲೈ ಓವರ್ ರಸ್ತೆಯ ಮೂಲಕ ಸಾಗುವ ವಾಹನಗಳು ಕೆನ್ನಮೆಟಲ್ ವಿಡಿಯಾ ಹತ್ತಿರ ಫ್ಲೈ ಓವರ್ ಪಕ್ಕದ ಎನ್.ಹೆಚ್.-4 ರಸ್ತೆ ಹಾಗೂ ಸರ್ವಿಸ್ ರಸ್ತೆಯ ಮೂಲಕ 8ನೇ ಮೈಲಿ, ದಾಸರಹಳ್ಳಿ, ಜಾಲಹಳ್ಳಿ ಕ್ರಾಸ್, ಪೀಣ್ಯ ಪೊಲೀಸ್ ಠಾಣೆ ಜಂಕ್ಷನ್, ಎಸ್ಆರ್ಎಸ್ ಜಂಕ್ಷನ್ ಮೂಲಕ ಗೊರಗುಂಟೆಪಾಳ್ಯ ತಲುಪಬಹುದಾಗಿರುತ್ತದೆ.
ಇನ್ನು ಸಿ.ಎಂ.ಟಿ.ಐ ಜಂಕ್ಷನ್‌ನಿಂದ ನೆಲಮಂಗಲ ಕಡೆಗೆ ಫ್ಲೈ ಓವರ್ ರಸ್ತೆಯಲ್ಲಿ ಸಾಗುವ ವಾಹನಗಳು ಪಾರ್ಲೆ-ಜಿ ಟೋಲ್ ತಲುಪಲು ಫೈಓವರ್ ಪಕ್ಕದ ಎನ್.ಹೆಚ್-4 ರಸ್ತೆ ಹಾಗೂ ಸರ್ವಿಸ್ ರಸ್ತೆಯಲ್ಲಿ ಎಸ್.ಆರ್.ಎಸ್ ಜಂಕ್ಷನ್, ಪೀಣ್ಯ ಪೊಲೀಸ್ ಠಾಣೆ ಜಂಕ್ಷನ್, ಪಾಲಹಳ್ಳಿ ಕ್ರಾಸ್, ದಾಸರಹಳ್ಳಿ, 8ನೇ ಮೈಲಿ ಮುಖಾಂತರ ಸಂಚರಿಸಲು ಅನುವು ಮಾಡಿಕೊಡಲಾಗಿದೆ.
2021 ರಿಂದ ನಡೆಯುತ್ತಿದ್ದ ಪೀಣ್ಯ ಮೇಲ್ಸೇತುವೆಯ ದುರಸ್ತಿ ಪೂರ್ಣವಾಗಿದೆ. ಈ ಹಿನ್ನೆಲೆಯಲ್ಲಿ ಲೋಡ್ ಟೆಸ್ಟಿಂಗ್ ಮಾಡಬೇಕಾಗಿರುವುದರಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಮೂರು ದಿನ ಸ್ಟ್ರಕ್ಚರಲ್ ಇಂಟಿಗ್ರಿಟಿ ಟೆಸ್ಟ್ ಮಾಡುತ್ತಿದ್ದಾರೆ. ಇದರಿಂದ ಜ 16 ರಿಂದ 19ರವರೆಗೆ ಪೀಣ್ಯ ಮೇಲ್ಸೇತುವೆ ಸಂಪೂರ್ಣವಾಗಿ ಬಂದ್ ಮಾಡುತ್ತೇವೆ. ಸಾರ್ವಜನಿಕರು ಈ ವೇಳೆ ಕೆಳಗಡೆ ಸರ್ವೀಸ್ ರಸ್ತೆ ಬಳಸಬೇಕು ಎಂದು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಎಂ.ಎನ್.ಅನುಚೇತ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಕೊರಿಯರ್ನಲ್ಲಿ ಅಕ್ರಮ ವಸ್ತುಗಳಿವೆ ಎಂದು ಬೆದರಿಸಿ ವಂಚನೆ: 14 ಆರೋಪಿಗಳು ಅರೆಸ್ಟ್