ಬೆಂಗಳೂರು : ತುಮಕೂರು ಮುಖ್ಯ ರಸ್ತೆಯ ಪೀಣ್ಯ ಎಲಿವೆಟೆಡ್ ರಸ್ತೆ ಕಾಮಗಾರಿ ಡಿಸೆಂಬರ್ ತಿಂಗಳಿಗೆ ಪೂರ್ಣಗೊಳ್ಳಲಿದ್ದು, ಭಾರಿ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನಸಭೆಯಲ್ಲಿ ತಿಳಿಸಿದರು.
ಪ್ರಶ್ನೋತ್ತರ ವೇಳೆ ಜೆಡಿಎಸ್ ಶಾಸಕ ಮಂಜುನಾಥ್. ಆರ್ ಅವರ ಪ್ರಶ್ನೆಗೆ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಉತ್ತರಿಸುತ್ತಿದ್ದ ವೇಳೆ ಮಧ್ಯಪ್ರವೇಶಿಸಿದ ಸಿಎಂ, ಕಳೆದ ವಾರ ಕೇಂದ್ರ ಸಚಿವ ನಿತಿನ್ ಗಡ್ಕರಿಯವರು ಬಂದಾಗ ನಾನು ಈ ವಿಷಯವನ್ನು ಪ್ರಸ್ತಾಪಿಸಿ ತುರ್ತಾಗಿ ಈ ಕಾಮಗಾರಿಯನ್ನು ಮುಗಿಸಿಕೊಡಲು ಮನವಿ ಮಾಡಿದ್ದೆ. ಫ್ಲೈಓವರ್ ಮೇಲೆ ನಡೆಸಲು ಉದ್ದೇಶಿಸಿರುವ ಕಾಮಗಾರಿಗಳ ಪ್ರಸ್ತಾವನೆಯನ್ನು ಸಿದ್ಧಪಡಿಸಿ ನಮ್ಮ ಇಲಾಖೆಗೆ ಸಲ್ಲಿಸಿದರೆ, ಆದಷ್ಟು ಶೀಘ್ರ ಹಣ ಬಿಡುಗಡೆ ಮಾಡುತ್ತೇನೆ ಎಂದಿದ್ದಾರೆ.
ಡಿಸೆಂಬರ್ ಒಳಗೆ ಕಾಮಗಾರಿ ಪೂರ್ಣ : ಈಗಾಗಲೇ ಅಧಿಕಾರಿಗಳು ಪತ್ರ ವ್ಯವಹಾರ ನಡೆಸಲು ಸೂಚಿಸಿದ್ದೇನೆ. ಡಿಸೆಂಬರ್ ಒಳಗೆ ಕಾಮಗಾರಿ ಪೂರ್ಣಗೊಳ್ಳಲಿದ್ದು, ಭಾರಿ ವಾಹನಗಳ ಸಂಚಾರಕ್ಕೆ ಮುಕ್ತವಾಗಲಿದೆ. ಇದು ಅತ್ಯಂತ ಪ್ರಮುಖ ರಸ್ತೆ ಎಂಬುದು ಸರ್ಕಾರದ ಗಮನದಲ್ಲಿದೆ. ಬೆಂಗಳೂರಿನಿಂದ ಪುಣೆ, ಮುಂಬೈ ಹಾಗೂ ಬೇರೆ ಬೇರೆ ರಾಜ್ಯಗಳಿಗೆ ಸಾವಿರಾರು ಸರಕು ಸಾಗಾಣಿಕೆ ವಾಹನಗಳು ಸಂಚರಿಸುತ್ತವೆ. ಹಾಗಾಗಿ ತುರ್ತಾಗಿ ಲೋಕೋಪಯೋಗಿ ಮತ್ತು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಗಳ ಜೊತೆ ಸಭೆ ನಡೆಸಿ ಡಿಸೆಂಬರ್ ಒಳಗೆ ಮುಗಿಸುವುದಾಗಿ ಹೇಳಿದರು.
ಭಾರಿ ವಾಹನಗಳಿಗೆ ಮಾತ್ರ ನಿಷೇಧ : ಇದಕ್ಕೂ ಮುನ್ನ ಸಚಿವ ಸಿ.ಸಿ.ಪಾಟೀಲ್ ಮಾತನಾಡಿ, ಈ ಫ್ಲೈ ಓವರ್ನಲ್ಲಿ ತಾಂತ್ರಿಕ ಕಾರಣಗಳಿಂದ ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ. ಈ ಫ್ಲೈಓವರ್ 4.35 ಕಿ.ಮೀ ಉದ್ದವಿದ್ದು ಅಲ್ಲಲ್ಲಿ ನೀರು ನಿಲ್ಲುತ್ತಿರುವುದರಿಂದ ಡ್ರೇನೇಜ್‍ಗಳ ಕಾರ್ಯಕ್ಷಮತೆ ಕುರಿತು ಪರಿವೀಕ್ಷಣೆ ನಡೆಸುತ್ತಿದ್ದ ಸಂದರ್ಭದಲ್ಲಿ ನಾಲ್ಕು ಕಡೆ ಟ್ರಿಟ್ರೆಸ್ಡ್ ಕೇಬಲ್‍ಗಳು ಹಾನಿಗೊಳಗಾಗಿರುವುದು ಕಂಡು ಬಂದಿದೆ. ಹೀಗಾಗಿ ಬೆಂಗಳೂರಿನ ಐಐಎಸ್‍ಸಿ ನೀಡಿದ ವರದಿ ಆಧಾರದ ಮೇಲೆ ಫೆ. 16 ರಂದು ಲಘು ವಾಹನಗಳ ಸಂಚಾರಕ್ಕೆ ಅವಕಾಶ ಕೊಟ್ಟಿದ್ದೇವೆ. ಆದರೆ ಭಾರಿ ವಾಹನಗಳ ಸಂಚಾರಕ್ಕೆ ನಿರ್ಬಂಧ ಮುಂದುವರೆದಿದೆ ಎಂದು ಸ್ಪಷ್ಟಪಡಿಸಿದರು.
ಈ ಫ್ಲೈ ಓವರ್ ರಚನಾತ್ಮಕ ಸುಸ್ಥಿತಿಯ ಕುರಿತು ಹಲವು ಪರೀಕ್ಷೆಗಳನ್ನು ನಡೆಸುತ್ತಿದ್ದೇವೆ. ಭಾರತ ರಾಷ್ಟ್ರೀಯ ಹೆದ್ದಾರಿ ಪ್ರಾಕಾರ ಬಾಂಬೆ, ಮುಂಬೈನಿಂದ ತಜ್ಞರ ವರದಿ ಬರಬೇಕು. ಈಗಿರುವ ಅಂದಾಜಿನಂತೆ ಡಿಸೆಂಬರ್ ವೇಳೆಗೆ ಭಾರೀ ವಾಹನಗಳ ಸಂಚಾರಕ್ಕೆ ಅನುವಾಗಲಿದೆ ಎಂದರು.
ಇದಕ್ಕೂ ಮುನ್ನ ವಿಷಯ ಪ್ರಸ್ತಾಪಿಸಿದ ಶಾಸಕ ಮಂಜುನಾಥ್, ಈ ಭಾಗದಲ್ಲಿ ಇದು ಅತ್ಯಂತ ಪ್ರಮುಖವಾದ ಫ್ಲೈಓವರ್ ಆಗಿದೆ. ಇಲ್ಲಿಂದ ಪುಣೆ, ಮಹಾರಾಷ್ಟ್ರಹಾಗೂ ಅನೇಕ ಜಿಲ್ಲೆಗಳಿಗೆ ವಾಹನಗಳು ಸಂಚರಿಸಬೇಕು. ನಿತ್ಯ ಲಕ್ಷಾಂತರ ಸರಕು ಸಾಗಣೆ ವಾಹನಗಳು ಹೋಗಬೇಕು. ಈಗ ಮೇಲೆ ವಾಹನ ಸಂಚರಿಸದ ಕಾರಣ ಸರ್ವೀಸ್ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗುತ್ತದೆ.
ಇತ್ತೀಚೆಗೆ ಐಕಿಯಾ ಎಂಬ ಬಹುರಾಷ್ಟ್ರೀಯ ಕಂಪನಿ ಪ್ರಾರಂಭವಾಗಿರುವುದರಿಂದ ಸಾವಿರಾರು ವಾಹನಗಳು ಸಂಚರಿಸುವುದರಿಂದ ದಟ್ಟಣೆ ಹೆಚ್ಚಾಗುತ್ತಿದೆ. ಅಪಾರ್ಟ್‍ಮೆಂಟ್‍ಗಳು ಇರುವುದರಿಂದ ಇದಕ್ಕೆ ತೊಂದರೆಯಾಗುತ್ತದೆ ಸರ್ಕಾರ ಇದನ್ನು ಪರಿಹರಿಸಬೇಕೆಂದು ಒತ್ತಾಯಿಸಿದರು.
ಮಳೆ ನಿಂತ ತಕ್ಷಣ ರಸ್ತೆ ಕಾಮಗಾರಿ : ರಾಜ್ಯದಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ಅಪಾರ ಪ್ರಮಾಣದ ರಸ್ತೆಗಳು ಹಾಳಾಗಿವೆ. ಮಳೆ ನಿಂತ ತಕ್ಷಣವೇ ಕಾಮಗಾರಿಗಳನ್ನು ಪ್ರಾರಂಭಿಸಲಾಗುವುದು ಎಂದ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಅವರು, ಪ್ರಶ್ನೋತ್ತರ ವೇಳೆ ಜೆಡಿಎಸ್ ಶಾಸಕ ಹೆಚ್.ಡಿ.ರೇವಣ್ಣ ಅವರ ಪರವಾಗಿ ಶಾಸಕ ಲಿಂಗೇಶ್ ಕೇಳಿದ ಪ್ರಶ್ನೆಗೆ ಉತ್ತರಿಸಿದರು.
ಕಳೆದ ಎರಡುಮೂರು ವರ್ಷಗಳಿಂದ ನಿರಂತರವಾಗಿ ಮಳೆಯಾಗುತ್ತಲೇ ಇರುವುದರಿಂದ ರಸ್ತೆಗಳು ವ್ಯಾಪಕವಾಗಿ ಹಾಳಾಗಿವೆ. ಮಳೆ ಬಂದ ಸಂದರ್ಭದಲ್ಲಿ ದುರಸ್ತಿ ಕಾರ್ಯ ಸಾಧ್ಯವಿಲ್ಲ. ಮಳೆ ನಿಂತ ತಕ್ಷಣ ಆದ್ಯತೆ ಮೇರೆಗೆ ಕಾಮಗಾರಿ ಪ್ರಾರಂಭಿಸುತ್ತೇವೆ ಎಂದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಲೋಕೋಪಯೋಗಿ ಇಲಾಖೆಗೆ ರಸ್ತೆಗಳ ಅಭಿವೃದ್ದಿಗಾಗಿ 300 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ. ಎಲ್ಲೆಲ್ಲಿ ಅಗತ್ಯವಿದೆಯೋ ಅಂತಹ ಆದ್ಯತೆ ಮೇರೆಗೆ ತೆಗೆದುಕೊಳ್ಳುತ್ತೇವೆ. ಪ್ರಸ್ತುತ ಮಳೆ ನಿಂತಿರುವುದರಿಂದ ಕಾಮಗಾರಿ ಆರಂಭಿಸಲಾಗುವುದು ಎಂದರು.
ಹಾಸನದಲ್ಲಿ ಕಳೆದ ಎರಡ್ಮೂರು ತಿಂಗಳಿನಿಂದ ಸುರಿದ ಮಳೆಯಿಂದಾಗಿ ಒಟ್ಟು 999 ರಸ್ತೆ ಹಾಗೂ 2,290.73 ಕಿ.ಮೀ , 7,861.90 ಲಕ್ಷ ನಷ್ಟವಾಗಿದೆ ಎಂದು ಅಂಕಿ - ಸಂಖ್ಯೆಗಳ ವಿವರ ನೀಡಿದರು. 300 ಕೋಟಿ ಅನುದಾನ ಲಭ್ಯವಾಗಿರುವುದರಿಂದ ಎಲ್ಲ ಜಿಲ್ಲೆಗಳಿಂದ ವಿಸ್ತೃತ ವರದಿ ಬಂದ ಮೇಲೆ ಕಾಮಗಾರಿ ಮಾಡುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ : ಪಿಎಸ್ಐ ಪರೀಕ್ಷೆ ಹಗರಣ.. ನೀವು ಈವೆಂಟ್ ಮ್ಯಾನೇಜರ್ ಎಂದ ಸಿಎಂ: ನನ್ನನ್ನು ಟಾರ್ಗೆಟ್ ಮಾಡಿದಷ್ಟು ಲಾಭ ಎಂದ ಸಿದ್ದು