ಬೆಂಗಳೂರು: ರಾಜರಾಜೇಶ್ವರಿ ನಗರ ಮತ್ತು ಶಿರಾ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಮತ್ತು ವಿಧಾನ ಪರಿಷತ್ನ ನಾಲ್ಕು ಕ್ಷೇತ್ರಗಳ ಚುನಾವಣೆಯಲ್ಲಿ ಶಾಂತಿಯುತ ಮತದಾನ ಮಾಡಿದ ಎಲ್ಲಾ ಮತದಾರರನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅಭಿನಂದಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು "ಸಬ್ ಕಾ ಸಾಥ್ ಸಬ್ ಕಾ ವಿಕಾಸ್' ಸಂಕಲ್ಪದ ಅಡಿಯಲ್ಲಿ ಇಡೀ ದೇಶಾದ್ಯಂತ ಸರ್ವಸ್ಪರ್ಶಿ-ಸರ್ವವ್ಯಾಪಿ ರೀತಿಯಲ್ಲಿ ಸ್ವಾವಲಂಬಿ ಬದುಕಿನ ಆತ್ಮ ನಿರ್ಭರ ಕಲ್ಪನೆಯೊಂದಿಗೆ ಭಾರತದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿದೆ.
ಅದೇ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜ್ಯದಲ್ಲಿ ಕೊರೊನಾಗೆ ಸಂಬಂಧಿಸಿ ಕೈಗೊಂಡ ಸುಧಾರಣಾ ಕ್ರಮಗಳು, ನೆರೆ ಸಂತ್ರಸ್ತರಿಗೆ ಸಂಬಂಧಿಸಿ ಕೈಗೊಂಡ ಕ್ರಮಗಳು, ಕರ್ನಾಟಕವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುತ್ತಿರುವ ಸಾಧನೆ ಮತದಾರರ ಮನಸ್ಸಿನಲ್ಲಿ ಅಚ್ಚೊತ್ತಿದ್ದು, ಈ ಚುನಾವಣೆಯಲ್ಲಿ ಅದು ಪ್ರಕಟಗೊಳ್ಳಲಿದೆ ಎಂದು ಕಟೀಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರಾಜ್ಯ ಸರ್ಕಾರ ಕೈಗೊಂಡ ಅಭಿವೃದ್ಧಿ ಕಾರ್ಯಗಳು, ಕೊರೊನಾ ಸಂದರ್ಭವನ್ನು ಸಮರ್ಥವಾಗಿ ನಿಭಾಯಿಸಿದ ರೀತಿಯನ್ನು ಗಮನಿಸಿದ ಮತದಾರರು ಬಿಜೆಪಿಯನ್ನು ಬೆಂಬಲಿಸುವುದು ನಿಶ್ಚಿತ. ಈ ಉಪ ಚುನಾವಣೆಯಲ್ಲಿ ಶಾಂತಿಯುತ ಹಾಗೂ ಪಾರದರ್ಶಕ ಮತದಾನಕ್ಕೆ ಕಾರಣೀಭೂತರಾದ ಚುನಾವಣಾ ಆಯೋಗ, ಪೊಲೀಸ್ ಇಲಾಖೆ, ಕೊರೊನಾ ವಾರಿಯರ್ಸ್ ಹಾಗೂ ರಾಜ್ಯ ಸರ್ಕಾರಕ್ಕೆ ನಳಿನ್ ಕುಮಾರ್ ಕಟೀಲ್ ಮಾಧ್ಯಮ ಹೇಳಿಕೆ ಮೂಲಕ ಅಭಿನಂದಿಸಿದ್ದಾರೆ.