ಬೆಂಗಳೂರು: 2019-20ನೇ ಸಾಲಿನ ಸರ್ಕಾರಿ ಹಾಗೂ ಖಾಸಗಿ ಅನುದಾನಿತ ಪದವಿ ಕಾಲೇಜುಗಳಲ್ಲಿನ ಪದವಿ ಕೋರ್ಸುಗಳಿಗೆ ಶುಲ್ಕ ನಿಗದಿಗೊಳಿಸುವ ಬಗ್ಗೆ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ.
ಕಾಲೇಜು ಶಿಕ್ಷಣ ಇಲಾಖೆ ವ್ಯಾಪ್ತಿಗೊಳಪಡುವ ಸರ್ಕಾರಿ ಹಾಗೂ ಖಾಸಗಿ ಅನುದಾನಿತ ಪದವಿ ಕಾಲೇಜುಗಳಲ್ಲಿನ ಪದವಿ ಕೋರ್ಸುಗಳಿಗೆ 2019-20ನೇ ಶೈಕ್ಷಣಿಕ ಸಾಲಿನ ಶುಲ್ಕವನ್ನು ನಿಗದಿಪಡಿಸಲಾಗಿದೆ. ನಿಗದಿಪಡಿಸಿದ ಶುಲ್ಕ ಸ್ವೀಕರಿಸಲು ಪ್ರಾಂಶುಪಾಲರುಗಳಿಗೆ ಅನುಮತಿ ನೀಡಲಾಗಿದೆ.
ಇದಕ್ಕಾಗಿ ಕೆಲ ಷರತ್ತುಗಳಿದ್ದು, ಆಯಾ ಕಾಲೇಜುಗಳ ಅರೆ ಸರ್ಕಾರಿ ಬ್ಯಾಂಕ್ ಖಾತೆಗಳನ್ನು ಪ್ರಾಂಶುಪಾಲರು ಹಾಗೂ ಸೇವೆಯಲ್ಲಿ ಹಿರಿಯರಾದ ಮತ್ತೊಬ್ಬ ಉಪನ್ಯಾಸಕರ ಹೆಸರಿನಲ್ಲಿ ಜಂಟಿ ಖಾತೆಗಳನ್ನಾಗಿ ಪರಿವರ್ತಿಸಿಕೊಳ್ಳಲು ಸೂಚಿಸಲಾಗಿದೆ.
ಕಾಲೇಜು ಅಭಿವೃದ್ಧಿ ಶುಲ್ಕ, ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ, ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿ, ದಿ ಸ್ಕೌಟ್ ಅಂಡ್ ಗೈಡ್ಸ್ ರೋವರ್ ಮತ್ತು ರೇಂಜರ್ ಘಟಕ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಶುಲ್ಕ, ಎನ್.ಎಸ್.ಎಸ್ ಶುಲ್ಕ ಮುಂತಾದುವುಗಳ ಶುಲ್ಕ ಸಂಗ್ರಹ ಹಾಗೂ ಅವುಗಳಗೆ ಸಂಬಂಧಿಸಿದಂತೆ ಸರ್ಕಾರಿ ಆದೇಶಗಳಲ್ಲಿ ತಿಳಿಸಿರುವ ಮಾರ್ಗಸೂಚಿ ಹಾಗೂ ನಿಬಂಧನೆಗಳನ್ನು ಕಡ್ಡಾಯವಾಗಿ ಪಾಲಿಸಲು ಸೂಚಿಸಲಾಗಿದೆ.
ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ, ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿ ಮೊತ್ತವನ್ನು ಕಾಲೇಜು ಶಿಕ್ಷಣ ಇಲಾಖೆಯ ಉಪನ್ಯಾಸಕರು
ಹಾಗೂ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸದುಪಯೋಗ ಪಡಿಸಿಕೊಳ್ಳಲು ಸೂಚಿಸಲಾಗಿದೆ.
2018-19ನೇ ಸಾಲಿನ ವಿದ್ಯಾರ್ಥಿನಿಯರಿಗೆ ಸರ್ಕಾರಿ, ಅರೆ ಸರ್ಕಾರಿ ಮತ್ತು ವಿಶ್ವವಿದ್ಯಾಲಯಗಳ ಶುಲ್ಕಗಳಲ್ಲಿ ನೀಡಲಾಗಿರುವ ವಿನಾಯಿತಿಯನ್ನು ಮುಂದುವರೆಸಲು ಹಾಗೂ 2019-20ನೇ ಸಾಲಿನಲ್ಲಿ ಅರೆ ಸರ್ಕಾರಿ ಹಾಗೂ ವಿಶ್ವವಿದ್ಯಾಲಯಗಳ ಶುಲ್ಕವನ್ನು ವಿದ್ಯಾರ್ಥಿನಿಯರಿಂದ ಸಂಗ್ರಹ ಮಾಡಿ, ಪ್ರವೇಶಾತಿ ಹಾಗೂ ಪರೀಕ್ಷಾ ಶುಲ್ಕ ವಸೂಲಾತಿ ಪ್ರಕ್ರಿಯೆ ಮುಗಿದ ನಂತರ ಮರುಪಾವತಿಸಲು ಸುತ್ತೋಲೆಯಲ್ಲಿ ಸೂಚಿಸಲಾಗಿದೆ.