ದೇವನಹಳ್ಳಿ: ಟ್ಯಾಕ್ಸಿ ಚಾಲಕನ ಆತ್ಮಹತ್ಯೆ ಹಿನ್ನೆಲೆ ಏರ್ಪೋರ್ಟ್ನಲ್ಲಿ ಟ್ಯಾಕ್ಸಿ ಸೇವೆಯನ್ನು ಸ್ಥಗಿತಗೊಳಿಸಿ ಪ್ರತಿಭಟನೆಗೆ ಸಿದ್ಧತೆ ನಡೆಸಿದ್ದು, ಟ್ಯಾಕ್ಸಿ ಸೇವೆ ಇಲ್ಲದೇ ಪ್ರಯಾಣಿಕರು ಪರದಾಡುವಂತಾಗಿದೆ.
ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿದ್ದ ಏರ್ ಪೋರ್ಟ್ ಟ್ಯಾಕ್ಸಿ ಚಾಲಕ ಪ್ರತಾಪ್ ನಿನ್ನೆ ಸಂಜೆ 4:30 ಸಮಯಯದಲ್ಲಿ ಏರ್ಪೋರ್ಟ್ ಮುಂಭಾಗದಲ್ಲಿಯೇ ಪೆಟ್ರೋಲ್ ಸುರಿದುಕೊಂಡು ಬೆಂಕಿ ಇಟ್ಟುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಪ್ರತಾಪ್ ಆತ್ಮಹತ್ಯೆ ಏರ್ಪೋರ್ಟ್ ಟ್ಯಾಕ್ಸಿ ಚಾಲಕರ ಆಕ್ರೋಶಕ್ಕೆ ಕಾರಣವಾಗಿ ಏರ್ಪೋರ್ಟ್ ನಲ್ಲಿ ಓಲಾ ಮತ್ತು ಉಬರ್ ಸಂಸ್ಥೆಗಳು ಪ್ರತಿ ಕಿ.ಮೀ. ಗೆ 10 ದರದಲ್ಲಿ ಅಗ್ಗದ ಸೇವೆಯನ್ನು ಪ್ರಯಾಣಿಕರಿಗೆ ನೀಡುತ್ತಿವೆ. ಆದರೆ, ಕೆಎಸ್ ಟಿಡಿಸಿ ಚಾಲಕರು ಪ್ರತಿ ಕಿ.ಮೀ ಗೆ 24 ರೂಪಾಯಿ ದರವನ್ನು ನಿಗದಿ ಮಾಡಿದೆ, ಸರ್ಕಾರದ ನಿಯಮ ಗಾಳಿಗೆ ತೂರಿರುವ ಖಾಸಗಿ ಸಂಸ್ಥೆಗಳಾದ ಓಲಾ ಮತ್ತು ಉಬರ್ ಅಗ್ಗದ ದರದಲ್ಲಿ ಪ್ರಯಾಣಿಕರಿಗೆ ಸೇವೆಯನ್ನು ನೀಡುತ್ತಿವೆ, ಅಗ್ಗದ ದರಿಂದ ಪ್ರಯಾಣಿಕರು ಸಹ ಓಲಾ ಮತ್ತು ಉಬರ್ ಸಂಸ್ಥೆಗಳತ್ತ ಆಕರ್ಷಿತರಾಗುತ್ತಿದ್ದಾರೆ. ಇದರಿಂದ ಏರ್ ಪೋರ್ಟ್ ಟ್ಯಾಕ್ಸಿ ಚಾಲಕರಿಗೆ ಬಾಡಿಗೆ ಸಿಗುತ್ತಿಲ್ಲ, ಕೊರೊನಾದಿಂದ ಈ ಮೊದಲೇ ಆರ್ಥಿಕವಾಗಿ ತೊಂದರೆಗೊಳಗಾದ ಚಾಲಕರು ಈಗ ದರ ಸಮರವನ್ನು ಎದುರಿಸಲಾಗದೇ ಆರ್ಥಿಕವಾಗಿ ನಷ್ಟಕ್ಕೆ ತುತ್ತಾಗಿದ್ದಾರೆ, ಇದೇ ಕಾರಣಕ್ಕೆ ಪ್ರತಾಪ್ ಸಹ ಆತ್ಮಹತ್ಯೆ ಮಾಡಿಕೊಂಡಿದ್ದರು.
ಪ್ರತಾಪ್ ಆತ್ಮಹತ್ಯೆಯಿಂದ ಅಕ್ರೋಶಗೊಂಡಿರುವ ಟ್ಯಾಕ್ಸಿ ಚಾಲಕರು ನಿನ್ನೆ ಸಂಜೆಯಿಂದಲೇ ಏರ್ ಪೋರ್ಟ್ ನಲ್ಲಿ ಟ್ಯಾಕ್ಸಿ ಸೇವೆ ಸ್ಥಗಿತಗೊಳಿಸಿದ್ದಾರೆ. ಏರ್ ಪೋರ್ಟ್ ನಲ್ಲಿ 1500ಕ್ಕೂ ಹೆಚ್ಚು ಏರ್ ಪೋರ್ಟ್ ಟ್ಯಾಕ್ಸಿ ಮತ್ತು 5000ಕ್ಕೂ ಹೆಚ್ಚು ಓಲಾ ಮತ್ತು ಉಬರ್ ಗಾಡಿಗಳಿದ್ದು, ಪ್ರಯಾಣಿಕರಿಗೆ ಸೇವೆ ನೀಡುತ್ತಿವೆ. ಏರ್ ಪೋರ್ಟ್ನಲ್ಲಿ ಟ್ಯಾಕ್ಸಿ ಸೇವೆ ಸ್ಥಗಿತವಾಗಿರುವುದರಿಂದ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ಉಂಟಾಗಿದೆ. ವಿದೇಶದಿಂದ ಬರುವ ಪ್ರಯಾಣಿಕರು ಟ್ಯಾಕ್ಸಿ ಸೇವೆ ನಂಬಿ ಬಂದಿರುತ್ತಾರೆ. ಆದರೆ, ಏಕಾಏಕಿ ಟ್ಯಾಕ್ಸಿ ಸೇವೆ ಸ್ಥಗಿತವಾಗಿರುವುದರಿಂದ ಬದಲಿ ವ್ಯವಸ್ಥೆ ಮಾಡಿಕೊಳ್ಳಲು ಪರದಾಡಬೇಕಿದೆ. ಸದ್ಯ ಪ್ರಯಾಣಿಕರು ಬಿಎಂಟಿಸಿ ಬಸ್ಗಳ ಸೇವೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ:ಬೆಂಗಳೂರು ಏರ್ಪೋರ್ಟ್ ಮುಂದೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಚಾಲಕ ಸಾವು