ಬೆಂಗಳೂರು: ರಸೆಲ್ ಮಾರುಕಟ್ಟೆಯಲ್ಲಿ ವಾಹನ ನಿಲುಗಡೆಗೆ ಸಂಬಂಧಿಸದಂತೆ ಸಮಸ್ಯೆ ತಲೆದೋರಿದ್ದು, ವಾಹನಗಳ ನಿಲುಗಡೆಗೆ ಶುಲ್ಕ ಕಟ್ಟಬೇಕೋ, ಬೇಡವೋ ಎಂಬ ಗೊಂದಲ ಜನರಲ್ಲಿ ಮೂಡಿದೆ.
ರಸೆಲ್ ಮಾರುಕಟ್ಟೆ ಜಾಗಗಳಲ್ಲಿ ಜನರಿಗೆ ಸುರಕ್ಷತೆ ನೀಡಬೇಕು ಎಂಬ ಹೈಕೋರ್ಟ್ ಆದೇಶದಂತೆ ಬಿಬಿಎಂಪಿ ಅಧಿಕಾರಿಗಳು ಕೆಲಸ ನಡೆಸುತ್ತಿದ್ದಾರೆ. ಪಾಲಿಕೆ ಅಧಿಕಾರಿಗಳು ಮಾಡುವ ಎಡವಟ್ಟುಗಳಿಂದ ಬೇಸತ್ತ ವ್ಯಾಪಾರಸ್ಥರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು.
ಪ್ರತಿಭಟನಾ ಸ್ಥಳಕ್ಕೆ ಸ್ಥಳೀಯ ಶಾಸಕ ರೋಷನ್ ಬೇಗ್ ಹಾಗೂ ಟ್ರಾಫಿಕ್ ಹೆಚ್ಚುವರಿ ಪೊಲೀಸ್ ಕಮೀಷನರ್ ಹರಿಶೇಖರನ್ ಆಗಮಿಸಿ ಸ್ಥಳ ಪರಿಶೀಲನೆ ನಡೆಸಿ ರಸೆಲ್ ಮಾರುಕಟ್ಟೆಯ ಮುಂಭಾದಲ್ಲಿ ಫೆನ್ಸಿಂಗ್ ಹಾಕಿರುವ ಜಾಗದಲ್ಲೇ ಪಾರ್ಕಿಂಗ್ಗೆ ಮರು ಅವಕಾಶ ನೀಡಲಾಗಿದೆ. ಮಾರುಕಟ್ಟೆಯ ಫುಟ್ಪಾತ್ನಿಂದ ನಾಲ್ಕೂವರೆ ಮೀಟರ್ ದೂರದವರೆಗೆ ಅಗ್ನಿಶಾಮಕ ವಾಹನಗಳಿಗೆ ದಾರಿ ಬಿಟ್ಟು ಪಾರ್ಕಿಂಗ್ಗೆ ಅವಕಾಶ ನೀಡಲಾಗಿದೆ. ಇದರಿಂದ ವ್ಯಾಪಾರ ಮತ್ತೆ ಎಂದಿನಂತೆ ನಡೆಸಲು ಸಾಧ್ಯವಾಗಿದೆ ಎಂದು ಮಾರುಕಟ್ಟೆ ವ್ಯಾಪಾರಿಗಳ ಸಂಘದ ಅಧ್ಯಕ್ಷ ಇದ್ರೀಶ್ ಚೌದ್ರಿ ತಿಳಿಸಿದ್ದರು.
ಮಾರುಕಟ್ಟೆಯಲ್ಲಿ ಪಾರ್ಕಿಂಗ್ ಶುಲ್ಕ ವಸೂಲಿ ಮಾಡುವ ಹಾಗಿಲ್ಲ. ಪಾಲಿಕೆ ರಸೆಲ್ ಮಾರುಕಟ್ಟೆ ಮುಂಭಾಗದಲ್ಲಿ ದ್ವಿಚಕ್ರ ಹಾಗೂ ಕಾರುಗಳ ಪಾರ್ಕಿಂಗ್ಗೆ ಸ್ಥಳಾವಕಾಶ ನೀಡಿ ಖಾಸಗಿ ಏಜೆನ್ಸಿಗೆ ಟೆಂಡರ್ ಕರೆದು ಗುತ್ತಿಗೆ ನೀಡಲು ಮುಂದಾಗಿದೆ. ಅಲ್ಲಿಯವರೆಗೂ ಗ್ರಾಹಕರು ಉಚಿತವಾಗಿ ಪಾರ್ಕಿಂಗ್ ಮಾಡಬಹುದು. ಪಾರ್ಕಿಂಗ್ ಹಣ ನೀಡುವ ಹಾಗಿಲ್ಲ ಎಂದು ವಿಶೇಷ ಆಯುಕ್ತರಾದ ರವೀಂದ್ರ ತಿಳಿಸಿದ್ದರು.
ಆದರೆ ಕಳೆದ ಇಪ್ಪತ್ತು ವರ್ಷಗಳಿಂದ ಗೌಸ್ ಪಾಷಾ ಎಂಬ ವ್ಯಕ್ತಿ ತಾನು ಬಿಬಿಎಂಪಿಯಿಂದ ಪಾರ್ಕಿಂಗ್ ನಿರ್ವಹಣೆ ಮಾಡುತ್ತಿದ್ದು, ಬಿಬಿಎಂಪಿಗೆ ತಿಂಗಳಿಗೆ 4200 ಶುಲ್ಕ ಕಟ್ಟುತ್ತಿದ್ದೇನೆ. ಮುಂದೆ ಟೆಂಡರ್ ಕರೆಯುವವರೆಗೂ ಪಾಲಿಕೆ ನನಗೆ ಅವಕಾಶ ನೀಡಿದೆ ಎನ್ನುತ್ತಿದ್ದಾರೆ. ಪಾರ್ಕಿಂಗ್ ಶುಲ್ಕ ಇಲ್ಲ ಅಂದ್ರೂ, ಇನ್ನೊಂದೆಡೆ ವಸೂಲಿ ಮಾಡಲಾಗುತ್ತಿದೆ ಎನ್ನಲಾಗಿದೆ. ಇದರಿಂದ ಜನರಲ್ಲಿ ಗೊಂದಲ ಮೂಡಿದೆ.