ಬೆಂಗಳೂರು: ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಒಂದು ಸಲಹಾ ಸಂಸ್ಥೆಯಾಗಿದ್ದು, ಮಕ್ಕಳನ್ನು ಪೋಷಕರಿಗೆ ಭೇಟಿ ನೀಡುವ ಹಕ್ಕು ಕಲ್ಪಿಸುವ ಅಧಿಕಾರ ಇರುವುದಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ. ಮಗುವಿನ ತಾಯಿಯೊಬ್ಬರು ಸಲ್ಲಿಸಿದ್ದ ಅರ್ಜಿ ಆಲಿಸಿದ ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ಅವರಿದ್ದ ಏಕಸದಸ್ಯ ಪೀಠ, ಆಯೋಗವು ಒಂದು ಸಲಹಾ ಸಂಸ್ಥೆಯಾಗಿದೆ. ಮಕ್ಕಳ ಹಕ್ಕುಗಳಿಗೆ ಸಂಬಂಧಿಸಿದಂತೆ ನೀತಿ ನಿರ್ಧಾರಗಳನ್ನು ರೂಪಿಸಲು ಸರಕಾರಕ್ಕೆ ಸಲಹೆ-ಸೂಚನೆಗಳನ್ನು ನೀಡಬಹುದು. ಆದರೆ ಯಾವುದೇ ತೀರ್ಪುಗಳನ್ನು ನೀಡುವ ಅಥವಾ ಪಕ್ಷಗಾರರ ನಡುವಿನ ವ್ಯಾಜ್ಯ ನಿರ್ಣಯಿಸುವ ಅಧಿಕಾರ ಆಯೋಗಕ್ಕಿಲ್ಲ ಎಂದು ಸ್ಪಷ್ಟಪಡಿಸಿದೆ.
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗ ಮಕ್ಕಳ ಹಕ್ಕುಗಳ ಕಾಯಿದೆ 2005ರ ಸೆಕ್ಷನ್ 13ರಡಿ ಸಾಂವಿಧಾನಿಕವಾಗಿ ಸ್ಥಾಪನೆಯಾಗಿರುವ ಆಯೋಗವಾಗಿದೆ. ಅದು ಆಯೋಗದ ರೀತಿ ಕಾರ್ಯ ನಿರ್ವಹಿಸಬೇಕು. ಸಕ್ಷಮ ನ್ಯಾಯಾಲಯದ ಮುಂದೆ ಮಗುವಿನ ಸುಪರ್ದಿ ವ್ಯಾಜ್ಯ ಬಾಕಿ ಇದ್ದಾಗ ಆಯೋಗ ಮಗುವಿನ ಭೇಟಿ ಹಕ್ಕನ್ನು ಮಂಜೂರು ಮಾಡುವ ಆದೇಶ ಹೊರಡಿಸಲು ಅವಕಾಶವಿಲ್ಲ ಎಂದು ಅಭಿಪ್ರಾಯಪಟ್ಟು, ತಂದೆಯೊಬ್ಬರಿಗೆ ಮಗುವನ್ನು ಭೇಟಿ ಮಾಡುವ ಹಕ್ಕು ಕಲ್ಪಿಸಿ 2017ರ ಜು.7ರಂದು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಹೊರಡಿಸಿದ್ದ ಆದೇಶ ರದ್ದುಗೊಳಿಸಿದೆ. ಇಂತಹ ಪ್ರಕರಣಗಳಲ್ಲಿ ಆಯೋಗ ಸೂಕ್ತ ರೀತಿಯಲ್ಲಿ ವಿವೇಚನಾಧಿಕಾರ ಬಳಸುವಲ್ಲಿ ವಿಫಲವಾಗಿದೆ. ಆಯೋಗ ಹೊರಡಿಸಿರುವ ಮಗುವಿನ ಭೇಟಿಯ ಹಕ್ಕು ಆದೇಶ ವ್ಯಾಪ್ತಿ ಮೀರಿದ್ದು ಮತ್ತು ಕಾನೂನು ಬಾಹಿರವಾದುದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಪ್ರಕರಣದ ಹಿನ್ನೆಲೆ: ಅರ್ಜಿದಾರರಾದ ಮಹಿಳೆ ಮತ್ತು ಪುರುಷರ ನಡುವೆ ಉತ್ತರ ಪ್ರದೇಶದ ಹತ್ರಾಸ್ ನಲ್ಲಿ 2003ರಲ್ಲಿ ಮದುವೆಯಾಗಿತ್ತು. ಎರಡು ಬಾರಿ ಬಲವಂತದ ಗರ್ಭಪಾತದ ನಂತರ 2010ರಲ್ಲಿ ಆ ಮಹಿಳೆಗೆ ಗಂಡು ಮಗು ಜನಿಸಿತು. ಬಳಿಕ 2016ರಲ್ಲಿ ಪತಿ, ಪತ್ನಿಯ ಮೇಲೆ ಹಲ್ಲೆ ನಡೆಸಿದ್ದರು. ಆ ಕುರಿತು ಎಚ್‌ಎಸ್‌ಆರ್ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಅವರಿಬ್ಬರ ನಡುವೆ ಕೌಟುಂಬಿಕ ಕಲಹ ಮುಂದುವರಿದಿತ್ತು. ಪತಿ 1980ರ ಪೋಷಕರು ಮತ್ತು ಮಕ್ಕಳ ಕಾಯಿದೆ ಅನ್ವಯ ಸಕ್ಷಮ ಕೋರ್ಟ್‌ನಲ್ಲಿ ಮಗುವಿನ ಭೇಟಿ (ವಿಜಿಟೇಷನ್) ಹಕ್ಕು ಬೆಂಗಳೂರಿನ ಪ್ರಧಾನ ಕೌಟುಂಬಿಕ ನ್ಯಾಯಾಲಯದ ಮುಂದೆ ಅರ್ಜಿ ಸಲ್ಲಿಸಿದ್ದರು.
ನ್ಯಾಯಾಲಯದಲ್ಲಿ ಅರ್ಜಿ ವಿಚಾರಣೆ ಬಾಕಿ ಇರುವಾಗಲೇ, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗ ಕೆಲವು ಶಿಫಾರಸು ಮಾಡಿತ್ತು. ಅಲ್ಲದೆ, ತಂದೆ ಪ್ರತಿ ತಿಂಗಳ ಮೊದಲ ಮತ್ತು ಮೂರನೇ ಶನಿವಾರ ಮಧ್ಯಾಹ್ನ 12ರಿಂದ ರಾತ್ರಿ 9 ಗಂಟೆವರೆಗೆ ಮಗುವನ್ನು ಭೇಟಿ ಮಾಡಬಹುದು. ಅದಕ್ಕಾಗಿ ಅವರು ಮಗುವನ್ನು ಕರೆದೊಯ್ಯಲು ಮತ್ತು ಪುನಃ ಕರೆದುಕೊಂಡು ಬಂದು ಬಿಡಲು ವ್ಯವಸ್ಥೆ ಮಾಡಿಕೊಳ್ಳತಕ್ಕದ್ದು ಎಂದು ಆದೇಶಿಸಿತ್ತು. ಮಕ್ಕಳ ಹಕ್ಕುಗಳ ಆಯೋಗದ ಈ ಆದೇಶವನ್ನು ಪ್ರಶ್ನಿಸಿದ್ದ ಪತ್ನಿ ಆಯೋಗಕ್ಕೆ ಮಗುವಿನ ಭೇಟಿಯ ಹಕ್ಕು ನೀಡುವ ಮತ್ತು ಆ ಕುರಿತು ಯಾವುದೇ ಆದೇಶ ನೀಡಿರುವ ಅಧಿಕಾರ ವ್ಯಾಪ್ತಿ ಇಲ್ಲ. ಹಾಗಾಗಿ ಆ ಆದೇಶ ರದ್ದುಗೊಳಿಸಬೇಕು ಎಂದು ನ್ಯಾಯಾಲಯವನ್ನು ಕೋರಿದ್ದರು.
ಇದನ್ನೂಓದಿ:'ಸಿಬಿಐ ಬಂಧನ ಪ್ರಶ್ನಿಸಿ ಹೈಕೋರ್ಟ್ಗೆ ಹೋಗಿ': ಡಿಸಿಎಂ ಸಿಸೋಡಿಯಾಗೆ ಸುಪ್ರೀಂ ಸೂಚನೆ